ಕೋಲಾರ : ಮೊನ್ನೆಯಷ್ಟೆ ಅಯೋಧ್ಯೆಯಲ್ಲಿನ ರಾಮಮಂದಿಯ ನಿರ್ಮಾಣಕ್ಕೆ ಹಿರಿಯರು ಚಾಲನೆ ಕೊಟ್ಟಿದ್ದಾರೆ. ಆದ್ರೆ, ರಾಮಮಂದಿರ ನಿರ್ಮಾಣದ ಕಾರ್ಯವು ಶುರುವಾಗಿಯೇ ಬಿಟ್ಟಿದೆ. ಹಾಗೆಯೇ, ಪ್ರಪಂಚಕ್ಕೆ ಎಂಟ್ಹತ್ತು ತಿಂಗಳಿನಿಂದ ಕಾಟ ಕೊಡ್ತಿರುವ ಕೊರೋನಾ ವೈರಸ್ ನಾಶಕ್ಕಾಗಿ ನಡೆಸುತ್ತಿರುವ ಲಸಿಕೆಯ ಸಂಶೋಧನೆಯೂ ಕೋಲಾರದಲ್ಲಿ ಅಂತಿಮ ಘಟ್ಟಕ್ಕೆ ಬಂದಿದೆ.
ಇವೆಲ್ಲವನ್ನೂ ಕೋಲಾರದ ಶಿಕ್ಷಕ ದಂಪತಿಗಳ ಕಲ್ಪನೆಯಲ್ಲಿ ಮೂಡಿ ಬಂದಿರುವ ವಿಘ್ನೇಶ್ವರನು ಸಾಧಿಸಿದ್ದಾನೆ. ಇದು ‘ಪವರ್ ಟಿವಿ’ ವಿಶೇಷ ಸುದ್ದಿ.
ಗೌರಿ ಸುತನಾದ ಗಣಪನನ್ನು ಹೇಗೆ ಬೇಕಾದ್ರೂ ಊಹಿಸಿಕೊಳ್ಳಬಹುದು. ಯಾವುದೇ ಕಾಲ ಮತ್ತು ವಿದ್ಯಮಾನಕ್ಕೂ ಸಹ ಗಣೇಶನ ಸಂಪರ್ಕವನ್ನು ಕಲ್ಪಿಸಬಹುದು. ಅದಕ್ಕೆ ತಕ್ಕಂತೆ ರೂಪ ಮತ್ತು ವಿವರಣೆಯನ್ನೂ ಕೊಡಬಹುದು. ಕೋಲಾರದ ಮಾಲೂರು ಪಟ್ಟಣದ ಶಿಕ್ಷಕ ದಂಪತಿಯು ಪ್ರತಿ ವರ್ಷವೂ ಗಣೇಶ ಹಬ್ಬದ ಸಂದರ್ಭದಲ್ಲಿ ವಿಘ್ನೇಶ್ವರನನ್ನು ಕಲ್ಪಿಸಿಕೊಳ್ಳುವ ರೀತಿಯೇ ವಿಶೇಷವಾಗಿರುತ್ತದೆ.
ಚಿತ್ರಕಲೆ ಶಿಕ್ಷಕ ದಯಾನಂದ ಹಾಗೂ ಇಂಗ್ಲಿಷ್ ಬೋಧಿಸುವ ಶಿಕ್ಷಕಿ ಕೋಮಲ ದಂಪತಿಗೆ ಪ್ರತಿ ವರ್ಷದ ಗಣೇಶ ಹಬ್ಬವೂ ವಿಶೇಷವೇ ಆಗಿರುತ್ತೆ. ಸಾಮಾಜಿಕ ಸಂದೇಶವನ್ನು ಸಾರುವ ಗಣೇಶನ ಹಲವಾರು ಅವತಾರಗಳನ್ನು ಈ ಶಿಕ್ಷಕ ದಂಪತಿಯು ಮನೆಯಲ್ಲಿಯೇ ಸೃಷ್ಟಿಸುತ್ತಾರೆ. ಈ ಸಲ ಅಯೋಧ್ಯೆಯಲ್ಲಿನ ರಾಮ ಮಂದಿರವನ್ನು ನಿರ್ಮಿಸುತ್ತಿರುವ ಮಾಸ್ಕ್ ಧಾರಿ ಗಣಪನನ್ನು ಸೃಷ್ಟಿಸಿರುವ ಇವ್ರು, ಕೊರೋನಾ ವೈರಸ್ ನಾಶಕ್ಕಾಗಿ ವ್ಯಾಕ್ಸಿನ್ ಸಂಶೋಧಿಸುವ ವಿನಾಯಕನನ್ನೂ ತಮ್ಮ ಕೈಚಳಕದಿಂದ ಮೂಡಿಸಿದ್ದಾರೆ. ಡಿಫರೆಂಟ್ ಗಣೇಶಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ವೀಕ್ಷಿಸಲು ಅನುವಾಗುವಂತೆ ಈ ಶಿಕ್ಷಕ ದಂಪತಿ ತಮ್ಮ ಮಹಡಿ ಮನೆಯನ್ನೇ ಮ್ಯೂಸಿಯಂ ಆಗಿ ಪರಿವರ್ತಿಸಿದ್ದಾರೆ.
ಇದಕ್ಕೂ ಮೊದಲು ಕೃಷಿಕನ ಸಂಕಷ್ಟ, ಸೈನಿಕರ ದೇಶ ಸೇವೆ, ಫ್ಲೋರೈಡ್ಯುಕ್ತ ಅಪಾಯಕಾರಿ ನೀರು, ಮ್ಯಾಗಿ ಸೇವನೆಯ ದುಷ್ಪರಿಣಾಮ, ಬಾಹುಬಲಿಯ ತ್ಯಾಗವನ್ನು ಬಿಂಬಿಸುವ ಗಣಪತಿಯನ್ನು ನಿರ್ಮಿಸಿ ಶಹಬ್ಬಾಸ್ಗಿರಿ ಪಡೆದುಕೊಂಡಿದ್ದಾರೆ. ಇದೀಗ ಕೊವಿಡ್ ಮಾರ್ಗಸೂಚಿ ಇರೋದ್ರಿಂದ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಒಟ್ಟಿನಲ್ಲಿ, ಮಾಲೂರು ಶಿಕ್ಷಕ ದಂಪತಿ ಮುಖದಲ್ಲಿ ಗಣೇಶನ ಹಬ್ಬದ ಸಡಗರಕ್ಕಿಂತಲೂ ಸಮಾಜದ ಸ್ವಾಸ್ಥ್ಯಕ್ಕೆ ಕೈಲಾದ ಮಟ್ಟಿಗೆ ಕೊಡುಗೆಯನ್ನು ಕೊಡುತ್ತಿರುವ ಸಾರ್ಥಕ ಭಾವ ಕಾಣುತ್ತಿದೆ. ಗಣೇಶ ಹಬ್ಬದ ಆಚರಣೆಗಿಂತಲೂ ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ತೃಪ್ತಿ ಅವ್ರಲ್ಲಿರೋದು ವಿಶೇಷವಾಗಿದೆ.
-ಆರ್.ಶ್ರೀನಿವಾಸಮೂರ್ತಿ