Homeದೇಶ-ವಿದೇಶಆಸ್ಟ್ರೇಲಿಯಾದಲ್ಲಿದೆ ಭಯೋತ್ಪಾದಕ ಸಂಘಟನೆ!

ಆಸ್ಟ್ರೇಲಿಯಾದಲ್ಲಿದೆ ಭಯೋತ್ಪಾದಕ ಸಂಘಟನೆ!

ಆಸ್ಟ್ರೇಲಿಯಾ ದೇಶವನ್ನ ಒಂದಲ್ಲ ಒಂದು ಕಂಟಕ ಕಾಡೋದಕ್ಕೆ ಶುರುವಾಗಿದೆ. ಇತ್ತೀಚೆಗೆ ಚೀನಾದ ಉಪಟಳದಿಂದ ಬೇಸತ್ತಿದ್ದ ಆಸ್ಟ್ರೇಲಿಯ ನಂತರ ಅಮೆರಿಕ ಜೊತೆಗೂಡಿ ಆಕಸ್ ಹಾಗು ಕ್ವಾಡ್​ನಲ್ಲಿ ಸೇರ್ಪಡೆಗೊಂಡು ಚೀನಾದ ಕಿರಿಕಿರಿಯಿಂದ ತಪ್ಪಿಸಿಕೊಂಡಿತ್ತು. ಆದ್ರೆ ಈಗ ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿದ್ದು, ಈ ಬಗ್ಗೆ ಆಸ್ಟ್ರೇಲಿಯಾ ಮತ್ತೆ ತಲೆಕೆಡಿಸಿಕೊಳ್ಳುವಂತಾಗಿದೆ. ಹಾಗಿದ್ರೆ ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರು ನಡೆಸುತ್ತಿರೋ ಕುಕೃತ್ಯವಾದ್ರೂ ಏನು?

ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಈ ಬಗ್ಗೆ ಹಲವು ರಾಷ್ಟ್ರಗಳು ಹಲವು ರೀತಿಯ ಕ್ರಮಗಳನ್ನ ಕೈಗೊಂಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇಂದು ಜಗತ್ತಿನಾದ್ಯಂತ ಈ ಸಮಸ್ಯೆ ಉಲ್ಭಣವಾಗ್ತಿದ್ದು, ಇದಕ್ಕೆ ಮೂಲ ಪ್ರೇರಣೆ ತಾಲಿಬಾನ್​ ಅಂತ ಹೇಳಲಾಗ್ತಿದೆ. ಕೆಲ ತಿಂಗಳ ಹಿಂದಷ್ಟೆ ಅಫ್ಘಾನಿಸ್ತಾನ ಅನ್ನುವ ನತದೃಷ್ಟ ರಾಷ್ಟ್ರವನ್ನ ವಶಪಡಿಸಿಕೊಂಡಿರುವ ಈ ತಾಲಿಬಾನಿಗಳು ಜಗತ್ತಿನ ಮುಂದೆ ತಾವು ಯಾರನ್ನೂ ಹಿಂಸೆಗೆ ಗುರಿಪಡಿಸಲ್ಲ, ಬದಲಾಗಿ ನಾವು ನಮ್ಮ ದೇಶದಲ್ಲಿ ಆಳ್ವಿಕೆ ನಡೆಕೊಂಡು ಹೋಗುತ್ತೇವೆ ಅನ್ನೋ ಹೇಳಿಕೆ ನೀಡಿದ್ರು. ಆದ್ರೆ ಇದೀಗ ಇದೇ ಉಗ್ರ ಸಂಘಟನೆ ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡಿದ್ದರ ಬಗ್ಗೆ ಬೇರೆ ಬೇರೆ ಉಗ್ರಗಾಮಿ ಸಂಘಟನೆಗಳು ಇದನ್ನ ಬಹುದೊಡ್ಡ ಸಾಧನೆ, ಉಗ್ರಗಾಮಿ ಸಂಘಟನೆಯೊಂದರ ಐತಿಹಾಸಿಕ ಜಯ ಅನ್ನೋ ರೀತಿ ವಿಜೃಂಭಿಸುತ್ತಿರುವ ಸುದ್ದಿಗಳು ಹೊರಬಿದ್ದಿವೆ.

ಒಂದು ಕಡೆ ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರೀತಾ ಇದ್ರೆ ಮತ್ತೊಂದು ಕಡೆ ಇದೇ ಉಗ್ರ ಸಂಘಟನೆಯಿಂದ ಮತ್ತೆ ಜಾಗತಿಕ ಉಗ್ರವಾದವನ್ನ ಬಿತ್ತೋ ಕೆಲಸ ನಡೆಯುತ್ತಿದೆ.. ಇದರ ಮಧ್ಯೆನೇ ಮತ್ತೊಂದು ಶಾಕಿಂಗ್​ ನ್ಯೂಸ್​ ಒಂದು ಹೊರಬಂದಿದ್ದು, ಇದು ಆಸ್ಟ್ರೇಲಿಯಾ ಸೇರಿದಂತೆ ಅಮೆರಿಕ, ಯುರೋಪ್​ ದೇಶಗಳಿಗೂ ಆತಂಕ ಶುರುವಾಗಿದೆ. ಇಷ್ಟು ದಿನಗಳ ಕಾಲ ತಾಲಿಬಾನಿ ಉಗ್ರ ಸಂಘಟನೆ ಜಗತ್ತಿಗೆ ಉಗ್ರವಾದವನ್ನ ಹರಡೋದಕ್ಕೆ ಪ್ರಯತ್ನ ನಡೆಸಿತ್ತು. ಆದ್ರೆ ಈಗ ಇಷ್ಟು ದಿನ ಸೈಲೆಂಟ್​ ಆಗಿದ್ದ ನಾಜಿವಾದ ಪ್ರೇರಿತ ಉಗ್ರ ಸಂಘಟನೆ ಫುಲ್​ ಆಕ್ಟಿವ್​ ಆಗಿದ್ದು, ಆಸ್ಟ್ರೇಲಿಯಾದಲ್ಲಿ ತನ್ನ ಉಗ್ರವಾದ ಬಿತ್ತುವ ಚಟುವಟಿಕೆ ಆರಂಭಿಸಿದೆ.

 

ಈ ಬಗ್ಗೆ ಎಚ್ಚೆತ್ತುಕೊಂಡಿರುವ ಆಸ್ಟ್ರೇಲಿಯಾ ಸರ್ಕಾರ ಇದೀಗ ಬಲಪಂಥೀಯ ಉಗ್ರಗಾಮಿಗಳ ಗುಂಪು ದಿ ಬೇಸ್ ಹಾಗೂ ಲೆಬನಾನ್ ಮೂಲದ ಹಿಜ್ಬುಲ್ ಸಂಘಟನೆಯನ್ನ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರ್ಪಡೆ ಮಾಡಲು ಆಸ್ಟ್ರೇಲಿಯಾ ಸರ್ಕಾರ ಮುಂದಾಗಿದೆ. ಆ ಮೂಲಕ ನಾಜಿವಾದ ಹಾಗು ತಾಲಿಬಾನ್​ ಉಗ್ರವಾದ ಬಿತ್ತಲು ಮುಂದಾಗಿದ್ದ ಸಂಘಟನೆಗಳಿಗೆ ಬುದ್ಧಿ ಕಲಿಸೋದಕ್ಕೆ ಆಸ್ಟ್ರೇಲಿಯಾ ಸಿದ್ಧವಾಗ್ತಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ಉಗ್ರಗಾಮಿ ಸಂಘಟನೆಗಳ ಉಪಟಳ ಹೆಚ್ಚಾಗುತ್ತಿರುವುದು ಕಾಂಗರೂ ನಾಡಿನ ರಾಷ್ಟ್ರೀಯ ಭದ್ರತೆಗೆ ಸವಾಲಾಗಿದೆ. ಇದು ಅಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್​ ಮೋರಿಸನ್​ ಚಿಂತೆಗೆ ಕಾರಣವಾಗಿದೆ. ಇನ್ನು ಈ ಉಗ್ರ ಸಂಘಟನೆಗಳು ಫುಲ್​ ಆಕ್ಟಿವ್​ ಆಗೋದಕ್ಕೆ ಪ್ರಾರಂಭವಾಗಿದ್ದು ಕೊವಿಡ್​ ನಿಯಮ ಸಡಿಲಿಕೆಯ ನಂತರ ಅಂತ ಹೇಳಲಾಗ್ತಿದೆ. ಕೊವಿಡ್​ ನಿಯಮ ಸಡಿಲಿಕೆ ನಂತರದಲ್ಲಿ ಆಸ್ಟ್ರೇಲಿಯಾದ ಕೆಲವೆಡೆ ಕ್ರೈಂ ರೇಟ್​ಗಳು ಜಾಸ್ತಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದವರಿಗೆ ಈ ಉಗ್ರ ಸಂಘಟನೆಗಳ ಜೊತೆ ನಂಟಿರೋದು ಬೆಳಕಿಗೆ ಬಂದಿದೆ.

ಇನ್ನು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ ಬಹುತೇಕ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದವರು ಇ-ಬೇಸ್​ ಉಗ್ರ ಸಂಘಟನೆಗೆ ಸೇರಿದವರು ಅಂತ ಹೇಳಲಾಗ್ತಾ ಇದೆ. ಈ ಉಗ್ರ ಸಂಘಟನೆ ನಾಜಿವಾದವನ್ನ ಬಲವಾಗಿ ಪ್ರತಿಪಾದಿಸ್ತಾ ಇದ್ದು ಮತ್ತೆ ಜಗತ್ತಿನಲ್ಲಿ ನಾಜಿವಾದವನ್ನ ಅಸ್ತಿತ್ವಕ್ಕೆ ತರೋದಕ್ಕೆ ಹೊರಟಿದೆ.

2018ರಲ್ಲಿ ಅಸ್ತಿತ್ವಕ್ಕೆ ಬಂದ ಈ ಸಂಘಟನೆ ಅಮೆರಿಕ, ಕೆನಡಾ, ಯುರೋಪಿನಲ್ಲಿ ಸಕ್ರಿಯವಾಗಿದ್ದು ಇದೀಗ ಆಸ್ಟ್ರೇಲಿಯಾದಲ್ಲಿ ತನ್ನ ಕಾರ್ಯ ಚಟುಚವಟಿಕೆಯನ್ನ ಆರಂಭಿಸಿದೆ. ಇದೇ ಕಾರಣಕ್ಕೆ ಈಗ ನಾಜಿವಾದದ ನೆಲೆಗಳಿರುವ ರಾಷ್ಟ್ರಗಳಿಗೂ ಆತಂಕ ಶುರುವಾಗಿದೆ. ಸದ್ಯದ ಮಟ್ಟಿಗೆ ಈ ಉಗ್ರ ಸಂಘಟನೆ ಅಮೆರಿಕಾ, ಕೆನಡಾ, ಯುರೋಪಿನ ಯವಜನತೆಯನ್ನ ಟಾರ್ಗೆಟ್​ ಮಾಡ್ತಿದ್ದು, ಮೊದಲು ಅವರ ಮನಸ್ಸಿನಲ್ಲಿ ನಾಜಿವಾದವನ್ನ ಬಿತ್ತಿ ತದನಂತರ ವಿಧ್ವಂಸಕ ಕೃತ್ಯಗಳನ್ನ ನಡೆಸ್ತಿದೆ ಅನ್ನೋ ಮಾಹಿತಿಯನ್ನ ಹಲವು ಗುಪ್ತಚರ ಇಲಾಖೆಗಳು ನೀಡಿವೆ.. ಇದೇ ಕಾರಣಕ್ಕೆ ಜಗತ್ತಿನ ಪ್ರಮುಖ ರಾಷ್ಟ್ರಗಳಿಗೆ ಮತ್ತೆ ಉಗ್ರವಾದ ಹೆಚ್ಚಾಗುವ ಆತಂಕ ಶುರುವಾಗಿದೆ… ಇದೆಲ್ಲ ಕಾರಣಗಳಿಂದ ಎಚ್ಚೆತ್ತುಕೊಂಡಿರುವ ಆಸ್ಟ್ರೇಲಿಯಾ, ದಿ ಬೇಸ್​ ಸೇರಿದಂತೆ 25 ಇಸ್ಲಾಮಿಕ್ ಉಗ್ರಗಾಮಿ ಗುಂಪುಗಳನ್ನು ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಂಡಿದೆ.

ಒಟ್ಟಾರೆಯಾಗಿ ಆಸ್ಟ್ರೇಲಿಯಾದ ಈ ನಿರ್ಧಾರಕ್ಕೆ ಅಮೆರಿಕಾ, ಕೆನಡಾ, ಸೇರಿದಂತೆ ಭಯೋತ್ಪಾದನಾ ವಿರೋಧಿ ದೇಶಗಳು ಸ್ವಾಗತಿಸಿದೆ.. ಇನ್ನು, ಆಸ್ಟ್ರೇಲಿಯಾದಲ್ಲಿ ಇನ್ನು ಕೆಲ ಉಗ್ರ ಸಂಘಟನೆಗಳು ಇದೆ ಅಂತ ಹೇಳಲಾಗ್ತಿದ್ದು, ಆ ಬಗ್ಗೆ ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ ಯಾವ ಕ್ರಮ ಕೈಗೊಳ್ಳುತ್ತೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments