ಶಿವಮೊಗ್ಗ : ಲೋಕಲ್ ಪ್ರಾಡಕ್ಟ್. ಪ್ರಧಾನಮಂತ್ರಿ ನರೇಂದ್ರ ಮೋದಿ, ಸ್ವಾವಲಂಭಿ ಭಾರತ ನಿರ್ಮಾಣಕ್ಕಾಗಿ ಪಣತೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ, ಆತ್ಮನಿರ್ಭರತೆಯ ಯೋಜನೆಗೆ ಕರೆ ನೀಡಿದ್ದಾರೆ. ಸ್ಥಳಿಯವಾಗಿ ಉತ್ಪಾದಿಸಿದ ಉತ್ಪನ್ನಗಳ ಮೂಲಕ ರೈತರ ಮೊಗದಲ್ಲಿ ನಗು ಮೂಡಿಸುವ ಪೂರಕ ಉತ್ಪನ್ನವೊಂದನ್ನ ಶಿವಮೊಗ್ಗದ ಯುವಕ ಸಂಶೋಧನೆ ನಡೆಸಿದ್ದಾರೆ. ಹೌದು, ಮಲೆನಾಡು ಜಿಲ್ಲೆ ಶಿವಮೊಗ್ಗದ ಈ ಯುವಕ ಎಲ್ಲರಿಗೂ ಚಿರಪರಿಚಿತ. ಇವರೇ ನಿವೇದನ್ ನೆಂಪೆ. ಈಗಾಗಲೇ, ಅಡಿಕೆಯಿಂದ ಸಂಶೋಧಿಸಿದ ಉತ್ಪನ್ನಗಳಾದ ಟೀ, ಜ್ಯೂಸ್, ಮತ್ತು ಕಾರಿನಲ್ಲಿ ಉಪಯೋಗಿಸುವ ಪರ್ಫ್ಯೂಂ ಸಂಶೋಧಿಸಿದ್ದ ನಿವೇದನ್ ಇದೀಗ ಕೋವಿಡ್ -19 ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ, ಸ್ಯಾನಿಟೈಸರ್ ಸಂಶೋಧಿಸಿ, ಮಾರುಕಟ್ಟೆಗೆ ಪರಿಚಯಿಸುವುದು ಮಾತ್ರವಲ್ಲದೇ, ಇದನ್ನು ಉತ್ಪಾದಿಸಲು ಯಾರಾದರೂ ಯುವಕರು ಮುಂದೆ ಬರಬಹುದೆಂದು, ಆಹ್ವಾನ ಕೂಡ ನೀಡಿದ್ದಾರೆ.
ತಾವು ಈ ಬಗ್ಗೆ ಕೇವಲ ಸಂಶೋಧನೆ ಮಾತ್ರ ನಡೆಸಿದ್ದು, ಇದನ್ನು ಉತ್ಪಾದಿಸಲು, ಆಸಕ್ತ ಯುವಕರಿಗೆ ಕರೆ ನೀಡಿದ್ದು, ಫಾರ್ಮುಲಾ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ. ಸ್ವಾವಲಂಬಿ ಭಾರತಕ್ಕೆ ಪೂರಕವಾಗಿರುವ ಉತ್ಪನ್ನವಾಗಿರುವ ಇದು ಹಳ್ಳಿಯಿಂದಲೇ, ಯಾರಾದರೂ ಮುಂದೆ ಬಂದರೆ, ಅವರ ಬೆಂಬಲಕ್ಕೆ ತಾವು ನಿಲ್ಲಲು ಈ ಯುವಕ ಪಣತೊಟ್ಟಿದ್ದಾರೆ. ಈಗಾಗಲೇ, ಬೇರೆ ರಾಜ್ಯ, ದೇಶಗಳಿಂದ ಉದ್ಯೋಗ ಕಳೆದುಕೊಂಡು, ವಾಪಾಸ್ ಹಳ್ಳಿಗೆ ಬಂದಿದ್ದು, ಇವರಿಗಾಗಿ ಈ ಉತ್ಪನ್ನದ ಬಗ್ಗೆ ಆಸಕ್ತಿ ಹೊಂದಲು ಕರೆ ನೀಡಿದ್ದಾರೆ. ಇನ್ನು ಅಡಿಕೆಯಲ್ಲಿ ಗ್ಯಾಲಿಕ್ಯಾಸಿಡ್ ಇದ್ದು, ವೈರಸ್ ಅಥವಾ ಬ್ಯಾಕ್ಟಿರಿಯಾಗಳನ್ನು ಹೊಡೆದೋಡಿಸುವ ಶಕ್ತಿ ಹೊಂದಿದೆ. ಇದರ ಜೊತೆಗೆ ಸಹಜವಾಗಿ ಸ್ಯಾನಿಟೈಸರ್ ಗೆ ಉಪಯೋಗಿಸುವ ಆಲ್ಕೋಹಾಲ್ ಉಪಯೋಗಿಸಲಾಗಿದ್ದು, ಯಾವುದೇ, ಕಲರಿಂಗ್, ಕೆಮಿಕಲ್ ಬಳಸದೇ, ಕೇವಲ ಅಡಿಕೆಯನ್ನು ಬಳಸಿಯೇ, ಈ ಸ್ಯಾನಿಟೈಸರ್ ಉತ್ಪನ್ನ ಸಂಶೋಧಿಸಿದ್ದಾರೆ. ಲಿಕ್ವಿಡ್ ಅಲ್ಲದೇ, ಜೆಲ್ ಉತ್ಪಾದಿಸಲಾಗಿದ್ದು, ಕೈ ಮತ್ತು ಬೆರಳುಗಳನ್ನು ಕೋಮಲವಾಗಿರಿಸುತ್ತೆ.
ಇನ್ನು ಮಲೆನಾಡು ಸೇರಿದಂತೆ, 8 ಜಿಲ್ಲೆಗಳಲ್ಲಿ ಅಡಿಕೆಗಳನ್ನು ಯಥೇಚ್ಚವಾಗಿ ಬೆಳೆಯಲಾಗುತ್ತದೆ. ಅಡಿಕೆ ನಿಷೇಧದ ಗುಮ್ಮ ಅಡಿಕೆ ಬೆಳೆಗಾರರಿಗೆ ಕಾಡುತ್ತಿರುವ, ಇಂತಹ ಕ್ಲಿಷ್ಟ ಸಂದರ್ಭದಲ್ಲಿ, ಅಡಿಕೆ ಮೇಲೆ ಸಂಶೋಧನೆ ನಡೆಸುತ್ತಿರುವ ನಿವೇದನ್ ನೆಂಪೆಯವರು, ಅಡಿಕೆಯ ಪರ್ಯಾಯ ವಿವಿಧ ಉತ್ಪನ್ನಗಳನ್ನು ಸಂಶೋಧಿಸುವ ಮೂಲಕ ಅಡಿಕೆ ಬೆಳೆಗಾರರ ನೆರವಿಗೆ ನಿಂತಿದ್ದಾರೆ. ಅದರಂತೆ, ಇದೀಗ, ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು, ಪ್ರತಿಯೊಬ್ಬರು ಸ್ಯಾನಿಟೈಸರ್ ಮೊರೆ ಹೋಗಿದ್ದು, ಇದನ್ನೇ ಅವಕಾಶ ಮಾಡಿಕೊಂಡಿರುವ, ಸಂಶೋಧಕ ನಿವೇದನ್, ಅಡಿಕೆಯನ್ನ ಜಗಿಯುವ ಹೊರತಾಗಿಯೂ, ಇತರೇ ಬಳಕೆಗೂ ಅಡಿಕೆ ಬಳಸಬಹುದೆಂದು ತೋರಿಸಿಕೊಟ್ಟಿದ್ದು, ಇದೀಗ ಸ್ಯಾನಿಟೈಸರ್ ಸಂಶೋಧಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ನಮ್ಮ ಮಲೆನಾಡು ಭಾಗದಲ್ಲಿ ಅಡಿಕೆ ಬೆಳೆಗಾರರು ಉಳಿಯಬೇಕೆಂಬ ಹಂಬಲ ಹೊಂದಿರುವ ನಿವೇದನ್, ಕೊರೊನಾ ಲಾಕ್ ಡೌನ್ ಸಮಸ್ಯೆಯಿಂದ ಗ್ರಾಮಗಳಿಗೆ ವಾಪಸ್ಸಾಗಿರುವ ಯುವಪೀಳಿಗೆಗೆ ಈ ಸ್ಯಾನಿಟೈಸರ್ ಉತ್ಪಾದಿಸಲು ಆಹ್ವಾನಿಸಿದ್ದಾರೆ. ಇದಕ್ಕೆ ಇವರ ಸ್ನೇಹಿತರು ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗಲೇ, ಕೇಂದ್ರ ಸರ್ಕಾರ, ಅಡಿಕೆ ನಿಷೇಧದ ಪ್ರಸ್ತಾಪವನ್ನಿಟ್ಟುಕೊಂಡು, ಅಡಿಕೆ ಬೆಳೆಗಾರರಿಗೆ ಗುಮ್ಮ ತೋರಿಸಿ ಹೆದರಿಸುವ ಮಧ್ಯೆ, ಕೊಂಚ ನಿಟ್ಟುಸಿರು ಬಿಡುವಂತೆ, ನಿವೇದನ್ ಮಾಡಿದ್ದಾರೆ ಎಂದರೂ ತಪ್ಪಿಲ್ಲ. ಏನೇ ಆಗ್ಲೀ, ಅಡಿಕೆಯ ಮತ್ತೊಂದು ಉತ್ಪನ್ನವನ್ನು ಹೊರ ತಂದಿರುವ ನಿವೇದನ್, ಎಲ್ಲಾ ಯುವಕರಿಗೂ ಮಾದರಿಯಾಗಿದ್ದಾರೆ ಎಂದರೆ ತಪ್ಪಿಲ್ಲ.