ಕೋಲಾರ: ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮಿಯೊಬ್ಬರ ಮಗನ ಅಪಹರಣ ಪ್ರಕರಣವು ಸುಖಾಂತ್ಯವಾಗಿದೆ. ಕೋಲಾರ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ. ಬಾಲಕನನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಲಾಗಿದ್ದು, ಪ್ರಕರಣದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ಪೋಷಕರು ವಿವಾದಿತ ಬಿಟ್ ಕಾಯಿನ್ ವ್ಯವಹಾರದಲ್ಲಿದ್ದರು ಅನ್ನೋ ಸ್ಫೋಟಕ ಮಾಹಿತಿಯನ್ನು ಪೊಲೀಸರು ಬಹಿರಂಗ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಿಂದ ಗುರುವಾರ ಸಂಜೆ ಉದ್ಯಮಿ ಬಿಜ್ನೋವ್ ಹಾಗೂ ಷರಿತಾ ಅವರ ಎಂಟು ವರ್ಷದ ಬಾಲಕ ಅನುಭವ್ ನನ್ನು ದುಷ್ಕರ್ಮಿಗಳ ತಂಡವು ಅಪಹರಿಸಿತ್ತು. ಬಾಲಕನ್ನು ಬಿಡುಗಡೆ ಮಾಡಲು 17 ಕೋಟಿ ರೂಪಾಯಿಗಳನ್ನು ಕೊಡಬೇಕು ಅಂತ ಪೋಷಕರಿಗೆ ಬೇಡಿಕೆಯಿರಿಸಿ ಕಿಡ್ನಾಪರ್ಗಳು ಮೆಸೇಜ್ ಮಾಡಿದ್ದರು. ಒತ್ತೆ ಹಣದ ಪೈಕಿ ಹೆಚ್ಚಿನ ಮೊತ್ತವನ್ನು 100 ಬಿಟ್ ಕಾಯಿನ್ಗಳ ಮೂಲಕ ಕೊಡಬೇಕು ಅಂತ ಅಪಹರಣರು ಒತ್ತಾಯಿಸಿದ್ದರು. ಆದರೆ ಇದೀಗ ಕಿಡ್ನಾಪರ್ಗಳು ಕೋಲಾರ ಜಿಲ್ಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಅಪಹರಣಕಾರರಿಂದ ಬಾಲಕನನ್ನು ಸುರಕ್ಷಿತವಾಗಿ ಕರೆತಂದಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಗುರುವಾರ ಉಜಿರೆಯಿಂದ ಇಂಡಿಕಾ ಕಾರಲ್ಲಿ ಬಾಲಕನ್ನು ಅಪಹರಿಸಿದ ದುಷ್ಕರ್ಮಿಗಳು ಹಲವಾರು ಕಡೆಯಲ್ಲಿ ಸುತ್ತಾಡಿಕೊಂಡು ಕೋಲಾರ ಜಿಲ್ಲೆಗೆ ಶುಕ್ರವಾರ ಪ್ರವೇಶಿಸಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊರ್ನಹಳ್ಳಿಯ ವಾಸಿ, ಕಾರ್ ಡ್ರೈವಿಂಗ್ ವೃತ್ತಿ ಮಾಡುವ ಗೆಳೆಯ ಮಹೇಶ, ಮಂಜುನಾಥನನ್ನು ಭೇಟಿ ಮಾಡಿದ ದುಷ್ಕರ್ಮಿಗಳು ಬಾಲಕನನ್ನು ಇಲ್ಲಿ ಇರಿಸಿದ್ದಾರೆ. ಆರೋಪಿಗಳ ಮೊಬೈಲ್ ಕರೆಗಳ ಬಗ್ಗೆ ನಿಗಾವಹಿಸಿದ್ದ ಪೊಲೀಸರು ಕೊರ್ನಹಳ್ಳಿಗೆ ಶುಕ್ರವಾರ ರಾತ್ರಿ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಾಲಕ ಅನುಭವ್ ನನ್ನು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ.
ಆರೋಪಿಗಳನ್ನು ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಾಥಮಿಕ ವಿಚಾರಣೆ ನಡೆಸಿದ ಪೊಲೀಸರು ನಂತರ ಕೋರ್ಟ್ ಗೆ ಹಾಜರುಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಅವರು, ವಿವಾದಿತ ಬಿಟ್ ಕಾಯಿನ್ ವ್ಯವಹಾರವನ್ನು ಬಾಲಕನ ತಂದೆ ನಡೆಸುತ್ತಿದ್ದರು ಎಂಬ ಮಾಹಿತಿಯಿದೆ. ಇದನ್ನು ತಿಳಿದುಕೊಂಡ ಆರೋಪಿಗಳು ಬಾಲಕನನ್ನು ಅಪಹರಿಸಿ ಒಂದು ನೂರು ಬಿಟ್ ಕಾಯಿನ್ಗಳಿಗಾಗಿ ಬೇಡಿಕೆಯಿರಿಸಿದ್ದರು ಅನ್ನುವ ಸ್ಪೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಮಾಹಿತಿಯು ಹೊರಬರಲಿದೆ ಅಂತ ಅಧಿಕಾರಿ ಹೇಳಿದ್ದಾರೆ.
ಒಟ್ಟಿನಲ್ಲಿ, ದುಷ್ಕರ್ಮಿಗಳಿಂದ ಅಪಹರಣವಾಗಿದ್ದ ಬಾಲಕನನ್ನು ಸುರಕ್ಷಿತವಾಗಿ ಕರೆತರುವ ಮೂಲಕ ಪೊಲೀಸರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಈ ಹಿಂದೆ ಏನಾದರೂ ಆರೋಪಿಗಳು ಇಂಥಹ ಪ್ರಕರಣಗಳಲ್ಲಿ ಭಾಗಿಯಾಗಿದ್ರಾ ಅನ್ನೋದನ್ನು ಅವರಿಂದ ಹೊರತರಬೇಕಾಗಿದೆ. ಅಷ್ಟು ಮಾತ್ರವಲ್ಲ, ವಿವಾದಿತ ಬಿಟ್ ಕಾಯಿನ್ ವ್ಯವಹಾರದಲ್ಲಿ ಬಾಲಕನ ಪೋಷಕರು ಸಕ್ರಿಯವಾಗಿದ್ದ ಬಗ್ಗೆಯೂ ತನಿಖೆ ನಡೆಸಬೇಕಾಗಿದೆ.