ನವದೆಹಲಿ: ಕೊರೋನಾ ಹರಡುವ ಭೀತಿಯಿಂದ ದೇಶದಾದ್ಯಂತ ಲಾಕ್ಡೌನ್ ಘೋಷಣೆಯಾಗಿದೆ. ಭಾರತದ ಆರ್ಥಿಕತೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಆರ್ಥಿಕ ತಜ್ಞರು ಇದೀಗ ಲಾಕ್ಡೌನ್ ಮುಂದುವರಿಸದಂತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಭಾರತದಲ್ಲಿ ಲಾಕ್ಡೌನ್ ಮುಂದುವರಿದರೆ ಸಂಕಷ್ಟ ಎದುರಾಗಲಿದೆ ಎಂದು ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜೊತೆ ನಡೆಸಿದ ಸಂವಾದದಲ್ಲಿ ತಮ್ಮ ಅಭಿಮತ ವ್ಯಕ್ತಪಡಿಸಿದ ರಾಜನ್, ‘ನಮ್ಮ ದೇಶದಲ್ಲಿ ಕೊರೋನಾಗಿಂತ ಲಾಕ್ಡೌನ್ ಆದೇಶವೇ ತುಂಬಾ ಅಪಾಯಕಾರಿಯಾಗಿದೆ. ಇನ್ನು ಲಾಕ್ಡೌನ್ ಮುಂದುವರಿದರೆ ದೀರ್ಘಕಾಲದವರೆಗೆ ಜನರಿಗೆ ಆಹಾರ ಒದಗಿಸಲು ಭಾರತವು ಸಮರ್ಥವಾಗಿಲ್ಲ. ಹಾಗಾಗಿ ಲಾಕ್ಡೌನ್ ಅನ್ನು ಮುತುವರ್ಜಿಯಿಂದ ತೆರವುಗೊಳಿಸಬೇಕು‘ ಎಂದು ಹೇಳಿದ್ದಾರೆ.
ಈ ಮಹಾಮಾರಿ ಕೊರೋನಾವನ್ನು ಶೇ.100ರಷ್ಟು ತೊಡೆದು ಹಾಕುವುದು ಕಷ್ಟಕರವಾಗಿದೆ. ಹಾಗಾಗಿ ಭಾರತ ಸರ್ಕಾರ ದೇಶದಲ್ಲಿ ಒಳ್ಳೆಯ ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಬೇಕಾಗಿದೆ. ನಮ್ಮ ದೇಶದಲ್ಲಿ ಬಡವರ ರಕ್ಷಣೆಗೆ ಕೇಂದ್ರ ಸರ್ಕಾರ ತಕ್ಷಣ ಮುಂದಾಗಬೇಕಾಗಿದ್ದು, ತಳಮಟ್ಟದ ಬಡವರ ಅನುಕೂಲಕ್ಕೆ ಕನಿಷ್ಟ 65 ಸಾವಿರ ಕೋಟಿ ಕೊಡಬೇಕು. ಹಾಗಾಗಿ ಲಾಕ್ಡೌನ್ ಮುಂದುವರಿಸಿದರೆ ದೇಶದ ಆರ್ಥಿಕತೆ ಮತ್ತಷ್ಟು ಹದಗೆಡಲಿದೆ. ಭಾರತ ಈಗಾಗಲೇ ಲಾಕ್ಡೌನ್ ಮುಂದುವರಿಸಲು ಹೋಗಿ ಸೋತಿದೆ ಎಂದರು.
ಇನ್ನು ಈ ಬಗ್ಗೆ ಮಾತನಾಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ, ‘ಕೊರೋನಾ ಸೋಂಕಿನಿಂದ ಸಾಯುವವರ ಸಂಖ್ಯೆಗಿಂತಲೂ ಲಾಕ್ಡೌನ್ನಿಂದ ಸಾವಿನ ಸಂಖ್ಯೆ ಹೆಚ್ಚಾಗಲಿದೆ‘ ಎಂದರು.