ಬೆಂಗಳೂರು : ರಾಜ್ಯದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ದಿನೇ ದಿನೇ ಕೊರೋನಾ ಸೊಂಕು ಹೆಚ್ಚಾಗುತ್ತಲೇ ಇದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗ್ತಿದೆ. ಬೆಂಗಳೂರಲ್ಲಿ ಕಡಿಮೆಯಂದ್ರೂ ದಿನಕ್ಕೆ 50 – 70 ಮಂದಿ ಕೊರೋನಾಗೆ ಬಲಿ ಆಗ್ತಿದ್ದಾರೆ. ಹೀಗಾಗಿ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರಕ್ಕೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ವಿಲ್ಸನ್ ಗಾರ್ಡನ್ , ಬನಶಂಕರಿ, ಸುಮನಹಳ್ಳಿ, ಹೆಬ್ಬಾಳ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರಕ್ಕೆ ಕ್ಯೂ ನಿಲ್ಲಬೇಕಾಗಿದೆ. ಮೃತದೇಹಗಳನ್ನು ಆ್ಯಂಬುಲೆನ್ಸ್ಗಳಲ್ಲಿ ತಂದು ವಿದ್ಯುತ್ ಚಿತಾಗಾರದ ಮುಂದೆ ಸಾಲು ಸಾಲಾಗಿ ನಿಲ್ಲಿಸಲಾಗಿದೆ. ಸೋಂಕಿತರ ಮೃತದೇಹ ಹೊತ್ತ ಆ್ಯಂಬುಲೆನ್ಸ್ ಗಳು ಒಂದೆಡೆ ನಿಂತಲ್ಲೇ ನಿಂತಿದ್ದರೆ, ಅತ್ತ ಸಹಜ ಸಾವಿನ ಕುಟುಂಬಸ್ಥರು ಕೂಡ ಮೃತದೇಹಗಳನ್ನು ಇಟ್ಟುಕೊಂಡು ಗಂಟೆಗಟ್ಟಲೆ ಕಾಯಬೇಕಾಗಿದೆ.
ಈಗಾಗಲೇ ಬಿಬಿಎಂಪಿ ಕೊರೋನಾದಿಂದ ಮೃತಪಟ್ಟ ವರ ಅಂತ್ಯಕ್ರಿಯೆಗಾಗಿಯೇ ಪ್ರತ್ಯೇಕವಾದ ಚಿತಾಗಾರ ಮಾಡೋ ಸಿದ್ಧತೆ ನಡೆಸಿದ್ದು, ಹೆಚ್ಚುವರಿ ಸಿಬ್ಬಂದಿ ನೇಮಕವನ್ನೂ ಮಾಡಿಕೊಳ್ಳುವ ಸಾಧ್ಯತೆ ಇದೆ.