ಖರೀದಿಸಿ ಎರಡೇ ವರ್ಷದಲ್ಲಿ ಗುಜರಿಗೆ ಹೋಯ್ತು ಆಂಬ್ಯುಲೆನ್ಸ್​​​..!

0
223

ಧಾರವಾಡ: ಜಿಲ್ಲೆಯ ಆರೋಗ್ಯ ಇಲಾಖೆಯೇ ಅನಾರೋಗ್ಯಕ್ಕೆ ತುತ್ತಾಗಿದೆ. ಜನರ ಆರೋಗ್ಯ ಕಾಪಾಡಬೇಕಾದ ಆರೋಗ್ಯ ಅಧಿಕಾರಿಗಳು ಕಿತಾಪತಿಯಲ್ಲಿ ತೊಡಗಿದ್ದು, ಎರಡು ವರ್ಷದ ಹಿಂದೆಯಷ್ಟೇ ಖರೀದಿಸಲಾಗಿದ್ದ ಆಂಬ್ಯುಲೆನ್ಸ್​​ಗಳನ್ನು ಗುಜರಿಗೆ ಕಳುಹಿಸಿದ್ದಾರೆ.

ಖರೀದಿಸಿದ ಎರಡೇ ವರ್ಷಗಳಲ್ಲಿ ಆಂಬ್ಯುಲೆನ್ಸ್​​ಗಳನ್ನು ಗುಜರಿಗೆ ಕಳುಹಿಸಿದ ಅಪಕೀರ್ತಿ ಧಾರವಾಡ ಜಿಲ್ಲೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲುತ್ತದೆ. ಜಿಲ್ಲೆಯ ಆರೋಗ್ಯ ಇಲಾಖೆ ಕಚೇರಿ ಆವರಣದಲ್ಲಿ ಒಟ್ಟು 8 ಅಂಬ್ಯುಲೆನ್ಸ್​​ಗಳನ್ನು ನಿಲ್ಲಿಸಲಾಗಿದೆ. ಸಣ್ಣಪುಟ್ಟ ರಿಪೇರಿ ಇರುವ ಆಂಬ್ಯುಲೆನ್ಸ್​​​ಗಳನ್ನು ರಿಪೇರಿ ಮಾಡಿಸದೇ ಗುಜರಿಗೆ ಹಾಕಿರುವುದರ ಹಿಂದೆ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಉತ್ತಮ ಸ್ಥಿತಿಯಲ್ಲಿರುವ ಆಂಬ್ಯುಲೆನ್ಸ್​​​ಗಳನ್ನು ಗುಜರಿಗೆ ಕಳುಹಿಸಿರುವುದರ ಕುರಿತು ಪ್ರತಿಕ್ರಿಯೆ ನೀಡಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 28 ಆಂಬ್ಯುಲೆನ್ಸ್​​​ಗಳಿದ್ದು ಆ ಪೈಕಿ 8 ಆಂಬ್ಯುಲೆನ್ಸ್​​​​ಗಳನ್ನು ಗುಜರಿಗೆ ಹಾಕಲಾಗುತ್ತಿದೆ.

ಧಾರವಾಡ ಜಿಲ್ಲೆಯಲ್ಲಿ ಕಳೆದ ವರ್ಷ 1,200 ಕ್ಕೂ ಹೆಚ್ಚು ಅಫಘಾತ ಪ್ರಕರಣಗಳು ದಾಖಲಾಗಿದ್ದು, ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್​ ಬರದ ಪರಿಣಾಮ ಸಾಕಷ್ಟು ಸಾವು ನೋವು ಸಂಭವಿಸಿವೆ. ಮೊದಲೇ ಆಂಬ್ಯುಲೆನ್ಸ್​​ಗಳ ಕೊರತೆ ಇರುವಾಗ ಸಂಚಾರಕ್ಕೆ ಯೋಗ್ಯವಿಲ್ಲ ಎಂಬ ನೆಪ ಹೇಳಿ ಎರಡೇ ವರ್ಷದ ಹಿಂದೆ ಖರೀದಿಸಿದ್ದ ಆಂಬ್ಯುಲೆನ್ಸ್​ಗಳನ್ನು ಗುಜರಿಗೆ ಹಾಕುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಒಟ್ಟಿನಲ್ಲಿ ಉತ್ತಮ ಸ್ಥಿತಿಯಲ್ಲಿರುವ ಆಂಬ್ಯುಲೆನ್ಸ್​​ಗಳನ್ನು ನಿರುಪಯುಕ್ತ ಮಾಡಿದ್ದರ ಹಿಂದೆ ಏನೋ ಅಕ್ರಮ ಇದೆ ಎನ್ನಲಾಗುತ್ತಿದ್ದು, ಸೂಕ್ತ ತನಿಖೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಸ್ತಫಾ ಕುನ್ನಿಭಾವಿ, ಧಾರವಾಡ

LEAVE A REPLY

Please enter your comment!
Please enter your name here