ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಸಂಗ್ರಹಣೆಗೆ ಎಲ್ಲಾ ರೀತಿಯ ಅಗತ್ಯ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ ಅವರು ಕೊರೋನಾ ಲಸಿಕೆ ಸ್ಟೋರೆಜ್ ಮಾಡಲು ಜಿಲ್ಲೆಯಲ್ಲಿ 135 ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ಕೇಂದ್ರಕ್ಕೂ 5 ವ್ಯಾಕ್ಸಿನೇಷನ್ ಸಪೋರ್ಟರ್ ಸಿಬ್ಬಂದಿಯನ್ನು ಗುರುತಿಸಲಾಗಿದೆ. ಜೊತೆಗೆ 5-10 ಕೇಂದ್ರಗಳಿಗೆ ಒಬ್ಬರಂತೆ, ಮೇಲ್ವಿಚಾರಕರನ್ನು ಸಹ ಗುರುತಿಸಿದ್ದೇವೆ ಎಂದರು. ಅಲ್ಲದೇ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಒಟ್ಟು 21,650 ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಕೊರೋನಾ ವಾರಿಯರ್ಸ್ ಗುರುತಿಸಲಾಗಿದೆ. ಲಸಿಕೆ ಬಂದ ತಕ್ಷಣ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಕೇಂದ್ರ ಮತ್ತ ರಾಜ್ಯ ಸರ್ಕಾರದ ಮಾರ್ಗಸೂಚಿ ಪಾಲಿಸಿ, ಜಿಲ್ಲೆಯಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿ.ಸಿ. ತಿಳಿಸಿದ್ದಾರೆ. ಅಲ್ಲದೇ, ಬ್ರಿಟನ್ ನಿಂದ ಬಂದಂತಹ ಎಲ್ಲರನ್ನೂ ಪಟ್ಟಿ ಬಂದಂತೆ, ಪರೀಕ್ಷೆ ನಡೆಸಿ, ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಈಗಾಗಲೇ, ನಾಲ್ವರನ್ನು ಮತ್ತು ಅವರಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಎಲ್ಲರನ್ನೂ ಪರೀಕ್ಷೆಗೊಳಪಡಿಸಿ, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಕೂಡ ತಮ್ಮ ನಿಗಾದಲ್ಲಿಯೇ ಇದ್ದು, ಸುಧಾರಿಸಿಕೊಳ್ಳುತ್ತಿದ್ದಾರೆ. 5 ಜನರು ನೆಗೆಟಿವ್ ವರದಿ ಬಂದಿದ್ದು, ಮತ್ತೊಬ್ಬರ ವರದಿ ಬಾಕಿ ಇದೆ. ಈಗಾಗಲೇ, ರೂಪಾಂತರಿ ಕೊರೋನಾ ಇರುವ ಎಲ್ಲರೂ ಸುಧಾರಿಸಿಕೊಳ್ಳುತ್ತಿದ್ದಾರೆ. ಎಲ್ಲಿಯೂ ಯಾವುದೇ ಸಮಸ್ಯೆ ಇಲ್ಲ. ಮೊದಲು ಬಂದಂತಹ ನಾಲ್ವರ ನಿವಾಸದ ಬಳಿ ಪ್ರಾಥಮಿಕ ಸಂಪರ್ಕ ಬಂದಿದ್ದ ಎಲ್ಲರನ್ನೂ ತಪಾಸಣೆಗೊಳಪಡಿಸಲಾಗಿದ್ದು, ಎಲ್ಲರದ್ದು, ನೆಗೆಟಿವ್ ವರದಿ ಬಂದಿದೆ ಎಂದು ವೈದ್ಯಾಧಿಕಾರಿ ಡಾ. ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.