ಶಿವಮೊಗ್ಗ: ರಾಜ್ಯ ಮತ್ತು ರಾಷ್ಟ್ರ ರಾಜಕಾರಣ ಸೇರಿದಂತೆ, ಪಕ್ಷದ ಆಗುಹೋಗುಗಳ ಬಗ್ಗೆ ಹಾಗೂ ಬೂತ್ ಮಟ್ಟದವರೆಗೂ ಜ. 2 ಮತ್ತು 3 ರಂದು ನಡೆಯಲಿರುವ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಇಂದು ಶಿಕಾರಿಪುರದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಈ ಹಿಂದೆ 1971 ರಲ್ಲಿ ಅಟಲ್ ಜೀ ಅವರ ನೇತೃತ್ವದಲ್ಲಿ, ಜನಸಂಘದ ಸಮಾವೇಶ ನಡೆದಿತ್ತು. 1986 ರಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಬಿ.ಬಿ. ಶಿವಪ್ಪ ನೇತೃತ್ವದಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆ ಶಿವಮೊಗ್ಗದಲ್ಲಿ ನಡೆದಿತ್ತು. 1996 ರಲ್ಲಿ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದಾಗ ರಾಜ್ಯ ಕಾರ್ಯಕಾರಿಣಿ ನಡೆಸಲಾಗಿತ್ತು. ಸುಮಾರು 25 ವರ್ಷಗಳ ಬಳಿಕ ಜ. 2 ಮತ್ತು 3 ರಂದು ಶಿವಮೊಗ್ಗದಲ್ಲಿ ನಡೆಸಲಾಗುತ್ತಿದೆ.
ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಈ ಸಭೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಎಲ್ಲಾ ಅಗತ್ಯ ತಯಾರಿ ನಡೆಸಲಾಗುತ್ತಿದೆ ಎಂದರು. ಪಕ್ಷದ ಮುಂದಿನ ಆಗುಹೋಗುಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದ್ದು, ರಾಜಕಾರಣವೂ ಸೇರಿದಂತೆ, ಬೂತ್ ಮಟ್ಟದ ಕಾರ್ಯವೈಖರಿ, ಮುಂಬರುವ ಚುನಾವಣೆಯನ್ನು ಕೂಡ ದೃಷ್ಟಿಯಲ್ಲಿಟ್ಟುಕೊಂಡು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಈ ಹಿಂದೆ ಬೆಳಗಾವಿಯ ರಾಜ್ಯ ಕಾರ್ಯಕಾರಿಣಿಯಲ್ಲಿ ನಡೆಸಲಾದ ತೀರ್ಮಾನದಂತೆ, ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದೆ. ಹೀಗಾಗಿ, ಈ ಸಭೆಯೂ ಕೂಡ ಬಹಳ ಮಹತ್ವದ್ದಾಗಿದೆ ಎಂದು ರಾಘವೇಂದ್ರ ಹೇಳಿದರು.
ರಾಷ್ಟ್ರ ಮತ್ತು ರಾಜ್ಯದ ಸುಮಾರು 200 ಮುಖಂಡರು ಮತ್ತು ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ, ಶಿವಮೊಗ್ಗ ನಗರ ಸೇರಿದಂತೆ, ಎಲ್ಲಾ ತಾಲೂಕುಗಳು ಅಲಂಕಾರಗೊಳ್ಳಲಿವೆ. ಈಗಾಗಲೇ, 200 ಕ್ಕೂ ಹೆಚ್ಚು ಕಾರ್ಯಕರ್ತರ ಪಡೆ, 27 ವಿಭಾಗಗಳ ಮೂಲಕ ಈ ವಿಶೇಷ ಸಭೆ ಯಶಸ್ವಿಗೆ ಶ್ರಮ ವಹಿಸಲಾಗುತ್ತಿದೆ. ಅದರಂತೆ, ಜಿಲ್ಲೆಯ ಗಡಿ ಭಾಗದ ತಾಲೂಕುಗಳು ಸೇರಿದಂತೆ, ಎಲ್ಲೆಡೆ ಕೂಡ ಬಂಟಿಂಗ್ಸ್ ಬ್ಯಾನರ್ ಗಳಿಂದ ಅಲಂಕಾರ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ದೃಷ್ಟಿಯಿಂದ ಈ ಸಭೆ ಮಹತ್ವದ್ದಾಗಿದ್ದು, ನಾಯಕರುಗಳು, ಇಲ್ಲಿ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವ ನಿರೀಕ್ಷೆ ಹೊಂದಲಾಗಿದೆ ಎಂದರು.