Homeಕ್ರೀಡೆP.Cricketಎಬಿಡಿ ನಿರ್ಧಾರಕ್ಕೆ ಅಭಿಮಾನಿಗಳ ಬೇಸರ

ಎಬಿಡಿ ನಿರ್ಧಾರಕ್ಕೆ ಅಭಿಮಾನಿಗಳ ಬೇಸರ

ಕ್ರಿಕೆಟ್​ ಜಗತ್ತಿನ ದಿಗ್ಗಜ ಹಾಗೂ ಆರ್​ಸಿಬಿ ತಂಡದ ಆಟಗಾರ ಎಬಿ ಡೆ ವಿಲಿಯರ್ಸ್ ಎಲ್ಲಾ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ್ದಾರೆ. ಎಬಿಡಿ ಅವರ ಈ ನಿರ್ಧಾರ ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇಸರವನ್ನ ವ್ಯಕ್ತಪಡಿಸ್ತಿದ್ದಾರೆ.

ಕ್ರಿಕೆಟ್ ಜಗತ್ತಿನ ದಿಗ್ಗಜ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್​ಮನ್, RCB ಪಾಲಿನ ಆಪತ್ಭಾಂಧವ, ಎಬಿ ಡಿವಿಲಿಯರ್ಸ್ ಅಂದ್ರೆ ಕ್ರಿಕೆಟ್​ ಪ್ರೇಮಿಗಳಿಗೆ ಏನೋ ಒಂದು ಖುಷಿ. ಎಬಿಡಿ ಬ್ಯಾಟ್ ಹಿಡಿದು ಒಮ್ಮೆ ಫೀಲ್ಡ್​​ಗೆ ಎಂಟ್ರಿ ಕೊಟ್ರು ಅಂದ್ರೆ ಸೋಲುವ ಹಂತದಲ್ಲಿರುವ ಪಂದ್ಯವನ್ನೂ ಗೆಲ್ಲಿಸೋವರೆಗೂ ಹೋರಾಡುವ ದಾಂಡಿಗ. ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಮೈದಾನದ ಮೂಲೆ ಮೂಲೆಗೆ ಬ್ಯಾಟ್ ಬೀಸಿ ಬೌಲರ್​ ಬೆವರು ಇಳಿಸುತ್ತಿದ್ದ ಎಬಿ ಡಿವಿಲಿಯರ್ಸ್​ ದಕ್ಷಿಣ ಆಫ್ರಿಕಾ ಮಾತ್ರವಲ್ಲದೆ, ಭಾರತದಲ್ಲಿಯೂ ಸಹ ಸಾವಿರಾರು ಅಭಿಮಾನಿಗಳನ್ನ ಪಡೆದಿದ್ದಾರೆ.

 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಆಡುತ್ತಿದ್ದ ಎಬಿಡಿ, ಐಪಿಎಲ್‌ನಲ್ಲಿ ಪ್ರತಿ ಆವೃತ್ತಿಯಲ್ಲಿಯೂ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದರು. ಎಬಿಡಿ ಐಪಿಎಲ್​ನಲ್ಲಿ ತಮ್ಮ ಅಮೋಘ ಪ್ರದರ್ಶನದ ಮೂಲಕ ಬೆಂಗಳೂರು ಅಭಿಮಾನಿಗಳಿಂದ ಆಪತ್ಬಾಂಧವ ಅಂತ ಕರೆಯಿಸಿಕೊಳ್ಳುತ್ತಿದ್ದರು. ಆದ್ರೆ ಈಗ ಎಬಿ ಡಿವಿಲಿಯರ್ಸ್ RCB ಮಾತ್ರವಲ್ಲದೇ ವಿಶ್ವದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಈ ಹಿಂದೆ, ಅಂದ್ರೆ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಬಿ ಡಿವಿಲಿಯರ್ಸ್ ನಿವೃತ್ತಿ ಘೋಷಣೆ ಮಾಡಿದ್ರು. ಆದ್ರೆ ದೇಶಿಯ ಪಂದ್ಯಗಳಲ್ಲಿ ಆಡುತ್ತಿದ್ದ ಎಬಿ ಡಿವಿಲಿಯರ್ಸ್ ಈಗ ಇದ್ದಕ್ಕಿದ್ದಂತೆ ಎಲ್ಲಾ ಮಾದರಿಯ ಕ್ರಿಕೆಟ್​​ನಿಂದ ನಿವೃತ್ತಿಯಾಗುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ತೀವ್ರ ಬೇಸರ ಮೂಡಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಿವೃತ್ತಿಯಾಗುತ್ತಿರುವ ಬಗ್ಗೆ ಎಬಿ ಡಿವಿಲಿಯರ್ಸ್ ಅಧಿಕೃತವಾಗಿ ಈ ಬಗ್ಗೆ ಘೋಷಣೆ ಮಾಡಿದ್ದು, ಇನ್ನು ಮುಂದೆ ಯಾವುದೇ ಮಾದರಿಯ ಕ್ರಿಕೆಟ್​ನಲ್ಲಿ ಆಡುವುದಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಒಬ್ಬ ಅದ್ಭುತವಾದ​ ಕ್ರಿಕೆಟ್​ ಆಟಗಾರನಾಗಿ ತಮ್ಮ ಕ್ರಿಕೆಟ್​ ಜರ್ನಿಯನ್ನ ಎಬಿಡಿ ಇಲ್ಲಿಗೆ ಮುಕ್ತಾಯಗೊಳಿಸಿದ್ದಾರೆ.

ಇನ್ನು ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿರುವ ಎಬಿ ಡಿ ವಿಲಿಯರ್ಸ್​ ‘ನಾನು ಟೈಟಾನ್ಸ್ ಪರವಾಗಿ ಆಡುವಾಗ, ದಕ್ಷಿಣ ಆಫ್ರಿಕಾ ಪರವಾಗಿ, ಆರ್‌ಸಿಬಿ ಪರವಾಗಿ ಆಡುವಾಗ ಅಥವಾ ವಿಶ್ವಾದ್ಯಂತ ಆಡುವಾಗ ಈ ಕ್ರೀಡೆ ನನಗೆ ಊಹಿಸಲೂ ಸಾಧ್ಯವಾಗದ ಅನುಭವ ಹಾಗೂ ಅವಕಾಶವನ್ನ ನೀಡಿದೆ. ಅದಕ್ಕಾಗಿ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ಇನ್ನು ಕೊನೆಯದಾಗಿ, ನನ್ನ ಕುಟುಂಬ – ನನ್ನ ಹೆತ್ತವರು, ನನ್ನ ಸಹೋದರರು, ನನ್ನ ಹೆಂಡತಿ ಡೇನಿಯಲ್ ಮತ್ತು ನನ್ನ ಮಕ್ಕಳ ತ್ಯಾಗವಿಲ್ಲದೆ ಏನೂ ಸಾಧ್ಯವಾಗುತ್ತಿರಲಿಲ್ಲ.
ನಾನು ನಮ್ಮ ಜೀವನದ ಮುಂದಿನ ಅಧ್ಯಾಯವನ್ನು ಎದುರು ನೋಡುತ್ತಿದ್ದೇನೆ. ಇದೇ ಹಾದಿಯಲ್ಲಿ ಸಾಗಿದ ಪ್ರತಿಯೊಬ್ಬ ತಂಡದ ಸಹ ಆಟಗಾರ, ಪ್ರತಿ ಎದುರಾಳಿ, ಪ್ರತಿ ತರಬೇತುದಾರ, ಪ್ರತಿಯೊಬ್ಬ ಫಿಸಿಯೋ ಮತ್ತು ಪ್ರತಿಯೊಬ್ಬ ಸಿಬ್ಬಂದಿ, ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ, ನಾನು ಎಲ್ಲೇ ಆಡಿದರೂ ನನಗೆ ದೊರೆತ ಬೆಂಬಲದಿಂದ ವಿನಮ್ರನಾಗಿದ್ದೇನೆ ಅಂತ ಭಾವನಾತ್ಮಕವಾಗಿ ಎಬಿ ಡಿವಿಲಿಯರ್ಸ್​ ಬರೆದುಕೊಂಡಿದ್ದಾರೆ.

ತಮ್ಮ ನಿವೃತ್ತಿ ಸುದ್ದಿಯನ್ನ ಎಬಿಡಿ ಘೋಷಣೆ ಮಾಡ್ತಿದ್ದಂತೆ ಟ್ವಿಟರ್​ನಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿಯ ಐಪಿಎಲ್​ ಸೋಲಿನ ಬಳಿಕ ಮುಂದಿನ ಕೆಲ ವರ್ಷಗಳ ಕಾಲ ಐಪಿಎಲ್​​ನಲ್ಲಿ ಆಡಲಿದ್ದೇನೆ ಅಂತ ಎಬಿಡಿ ಹೇಳಿದ್ರು ಕೂಡ ಈಗ ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅನ್ನೋ ಪ್ರಶ್ನೆ ಅಭಿಮಾನಿ ವಲಯದಲ್ಲಿ ಮೂಡಿದೆ. ಇನ್ನು ಕೆಲ ಅಭಿಮಾನಿಗಳು ಎಬಿಡಿಯ ನಿವೃತ್ತಿ ಬದುಕು ಸುಖಕರವಾಗಿರಲಿ ಅಂತ ಸಾಮಾಜಿಕ ಜಾಲತಾಣದಲ್ಲಿ​ ಹಾರೈಸ್ತಿದ್ದಾರೆ.

ಎಬಿ ಡಿವಿಲಿಯರ್ಸ್​ ಐಪಿಎಲ್​ನ 184 ಪಂದ್ಯಗಳಲ್ಲಿ 39.70 ಸರಾಸರಿಯಲ್ಲಿ 5,162 ರನ್ ಗಳಿಸುವ ಮೂಲಕ ಸಾರ್ವಕಾಲಿಕ ರನ್ ​ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರ ಸ್ಟ್ರೈಕ್ ರೇಟ್ 151.68. ಅವರು ಐಪಿಎಲ್ 2021 ರಲ್ಲಿ 15 ಪಂದ್ಯಗಳನ್ನು ಆಡಿದ್ದು, 31.30 ರ ಸರಾಸರಿಯಲ್ಲಿ 313 ರನ್ ಗಳಿಸಿದ್ರು.

ಇದೀಗ ಒಟ್ಟಾರೆಯಾಗಿ ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವ ಮೂಲಕ ತಮ್ಮ ಬದುಕಿನಲ್ಲಿ ಮತ್ತೊಂದು ಹೊಸ ಅಧ್ಯಾಯ ಪ್ರಾರಂಭಿಸೋದಕ್ಕೆ ಹೊರಟಿದ್ದಾರೆ. ಹೀಗಾಗಿ ಅವರ ನಿವೃತ್ತಿ ಬದುಕು ಸುಖಕರವಾಗಿರಲಿ ಅನ್ನೋದೇ ಎಲ್ಲರ ಆಶಯವಾಗಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments