ಸೈಲೆಂಟ್ ಆಗಿ ಸದ್ದು ಮಾಡ್ತಿದೆ ವಿಕ್ರಾಂತ್ ರೋಣ. ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆಯ ನಡುವೆ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಧೂಳೆಬ್ಬಿಸಿದೆ. ಓಟಿಟಿಯಲ್ಲೂ ದಾಖಲೆ ಮಟ್ಟದ ವೀಕ್ಷಣೆ ಕಂಡಿದ್ದು ಅಬ್ಬರಿಸ್ತಿದೆ. ಇದೀಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಈ ಮೂಲಕ ರೋಣನಿಗೆ ಮತ್ತಷ್ಟು ಎನರ್ಜಿ ಬಂದಿದೆ.
- ಪ್ರೀತಿಯ ಸ್ನೇಹಿತ ಕಿಚ್ಚನಿಗೆ ಸ್ಪಿನ್ ಜಾದೂಗಾರ ಪ್ರಶಂಸೆ
ಕೆಜಿಎಫ್ ನಂತ್ರ ಕನ್ನಡ ಸಿನಿಲೋಕದಲ್ಲಿ ಹೊಸ ಅಲೆ ಎಬ್ಬಿಸಿದ ಸಿನಿಮಾ ವಿಕ್ರಾಂತ್ ರೋಣ. 3ಡಿ ಎಫೆಕ್ಟ್ನಲ್ಲಿ ಒಟ್ಟು ಆರು ಭಾಷೆಗಳಲ್ಲಿ ತೆರೆ ಕಂಡು ದಾಖಲೆ ಬರೆದ ಸಿನಿಮಾ. ಕಿಚ್ಚನ ಸಿನಿಕರಿಯರ್ನಲ್ಲಿ ಹೊಸ ಅದ್ಯಾಯದ ಪುಟ ತೆರೆದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ವಿಕ್ರಾಂತ್ ರೋಣ. ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆಯ ನಡುವೆಯೂ 200 ಕೋಟಿಗೂ ಅಧಿಕ ಕಲೆಕ್ಷನ್ ಗಳಿಸಿದ ವಿಭಿನ್ನ ಕಮರೊಟ್ಟು ಕಥೆ.
ಕಿಚ್ಚ ಸುದೀಪ್ ಬರ್ತ್ ಡೇ ದಿನವೇ ಓಟಿಟಿಗೆ ಎಂಟ್ರಿ ಕೊಟ್ಟ ವಿಕ್ರಾಂತ್ ಗೆಲುವಿನ ನಾಗಾಲೋಟ ಮುಂದುವರೆಸಿದ್ದಾನೆ. 500 ಮಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಕಂಡು ಹೊಸ ಇತಿಹಾಸ ನಿರ್ಮಿಸಿದ್ದಾನೆ. ಈ ನಡುವೆ ಖ್ಯಾತ ಕ್ರಿಕೆಟ್ ಪಟು, ಸ್ಪಿನ್ ಮೋಡಿಗಾರ, ಆಫ್ ಸ್ಪಿನ್, ಲೆಗ್ ಸ್ಪಿನ್ ಜಾದುಗಾರ ಅನಿಲ್ ಕುಂಬ್ಳೆ ಕಡೆಯಿಂದ ರೋಣನಿಗೆ ಮೆಚ್ಚುಗೆ ಸಿಕ್ಕಿದೆ. ಸಿನಿಮಾ ವೀಕ್ಷಿಸಿ ಕಿಚ್ಚನಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕುಂಬ್ಳೆ ಪ್ರೀತಿಯ ಸ್ನೇಹಿತನ ಆ್ಯಕ್ಟಿಂಗ್ ಕಂಡು ಥ್ರಿಲ್ ಆಗಿದ್ದಾರೆ.
- ರಾಜಕುಮಾರಿ ಹಾಡಿಗೆ ತಲೆದೂಗಿದ ಸ್ಟಾರ್ ಕ್ರಿಕೆಟಿಗ
- ಅನಿಲ್ಗೆ ಹಿಡಿಸಿದ ಅನೂಪ್ ಭಂಡಾರಿ ಮೇಕಿಂಗ್
ವಿಕ್ರಾಂತ್ ರೋಣ ಟೀಸರ್ ಮೂಲಕವೇ ಪ್ರೇಕ್ಷಕರ ಎದೆ ಬಡಿತ ಜೋರು ಮಾಡಿದ್ದ ಸಿನಿಮಾ. ಕಮರೊಟ್ಟು ಗ್ರಾಮದಲ್ಲಿ ನಡೆಯುವ ನಿಗೂಢ ಕಥೆ ಇದು. ಅಲ್ಲಿನ ವಿಸ್ಮಯಕಾರಿ ಕೊಲೆಗಳ ಹಿಂದಿನ ಮೂಲ ಸತ್ಯಗಳೇನು ಎಂಬ ಹುಡುಕಾಟದ ಭಯಾನಕ ಕಥೆಗೆ ಅನಿಲ್ ಕುಂಬ್ಳೆ ಕೂಡ ಫಿದಾ ಆಗಿದ್ದಾರೆ. ಈ ಸಿನಿಮಾ ನೋಡಿರುವ ಅನಿಲ್ ಕುಂಬ್ಳೆ ಮೆಚ್ಚಿಕೊಂಡು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಿಚ್ಚನಿಗೂ, ಕ್ರಿಕೆಟ್ಗೂ ಎಲ್ಲಿಲ್ಲದ ನಂಟು. ಅಪಾರ ಅಭಿಮಾನಿ ಬಳಗ ಹೊಂದಿರುವ ಕಿಚ್ಚ ಸುದೀಪ್ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರ ಜತೆಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಕಿಚ್ಚನನ್ನು ಕಂಡ್ರೆ ಕ್ರಿಕೆಟ್ ಆಟಗಾರರು ಕೂಡ ಪ್ರೀತಿಯಿಂದ ಅಪ್ಪುತ್ತಾರೆ. ಯೆಸ್.. ಇದಕ್ಕೆ ಸಾಕ್ಷಿಯಾಗಿ ಅನಿಲ್ ಕುಂಬ್ಳೆ ಕೂಡ ಸಿನಿಮಾ ವೀಕ್ಷಿಸಿ ನೆಚ್ಚಿನ ಗೆಳೆಯನಿಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಜತೆಗೆ ಸಿನಿಮಾದ ರಾಜಕುಮಾರಿ ಹಾಡನ್ನು ಮೆಚ್ಚಿಕೊಂಡಿದ್ದು, ವಿಜಯ್ ಪ್ರಕಾಶ್ ದನಿಗೆ ಕ್ಲೀನ್ ಬೋಲ್ಡ್ ಅಗಿದ್ದಾರೆ.
ವಿಕ್ರಾಂತ್ ರೋಣ ಕೊನೆಯವರೆಗೂ ಸಸ್ಪೆನ್ಸ್ ಥ್ರಿಲ್ಲರ್ ಕಾಯ್ದುಕೊಂಡಿದೆ. ಸಿನಿಮಾ ತುಂಬಾ ಹಿಡಿಸಿತು ಎಂದು ಹಾಡಿ ಹೊಗಳಿದ್ದಾರೆ. ಅನೂಪ್ಭಂಡಾರಿ ಹಾಗೂ ಇಡೀ ಟೀಮ್ಗೆ ಅಭಿನಂದನೆ ಸಲ್ಲಿಸಿದ್ದಾರೆ ಅನಿಲ್ ಕುಂಬ್ಳೆ. ಅಂತೂ ರಕ್ಕಮ್ಮನ ಹಾವಳಿ ಇನ್ನೂ ನಿಂತಿಲ್ಲ. ಸಿನಿಪ್ರಿಯರ ಹೊರತಾಗಿ ಕ್ರಿಕೆಟ್ ಆಟಗಾರರಿಗೂ ಕ್ರಿಕೆಟ್ ಗುಂಗು ಹಿಡಿಸಿದ್ದು ಖುಷಿಯ ವಿಚಾರ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ


