ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ವರುಣನಬ್ಬರ

ಬಳ್ಳಾರಿ: ಜಿಲ್ಲೆಗಳಲ್ಲಿ ಭಾರೀ ಮಳೆಯಬ್ಬರಕ್ಕೆ ಜನ ತತ್ತರಿಸಿದ್ದಾರೆ. 3-4 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ರಕ್ಕಸ ಮಳೆಗೆ ಬಳ್ಳಾರಿ ಜಿಲ್ಲೆಯ ವೇದಾವತಿ, ಹಗರಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.ಸಿರಗುಪ್ಪ ತಾಲೂಕಿನ ಮುದೇನೂರು ಬಳಿಯ ಶನೇಶ್ವರ ದೇವಸ್ಥಾನ ವೇದಾವತಿ ನದಿಯ ನೀರಿನ ಪ್ರವಾಹದಿಂದ ಮುಳುಗಡೆಯಾಗಿತ್ತು.ದೇವಸ್ಥಾನಕ್ಕೆ ತೆರಳಿದ್ದ ಪೂಜಾರಿ ಕುಟುಂಬದ ನಾಲ್ವರು ಪ್ರವಾಹಕ್ಕೆ ಸಿಲುಕಿಗೊಂಡಿದ್ದಾರೆ.ಇವರನ್ನು ರಕ್ಷಣೆ ಮಾಡಲು ತೆರಳಿದ್ದ ಅಗ್ನಿಶಾಮಕ ಸಿಬ್ಬಂದಿ ಬೋಟ್ ನೀರಿನ ಸೆಳೆತಕ್ಕೆ ಪಲ್ಟಿಯಾಗಿದೆ.ಮೂವರು ಅಗ್ನಿಶಾಮಕ ಸಿಬ್ಬಂದಿ ದೇವಸ್ಥಾನ ಸೇರಿದ್ದಾರೆ.ಲಿಂಗರಾಜ ಎನ್ನುವ ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಕಿ.ಮೀ. ಈಜಿ ದಡ ಸೇರಿದ್ದಾರೆ.ರಕ್ಷಣೆಗೆ ಹೋದವರು ಸೇರಿ ಒಟ್ಟು ಎಂಟು ಜನರು ದೇವಸ್ಥಾನದ ಮೇಲೇರಿ ಕುಳಿತುಕೊಂಡಿದ್ದಾರೆ.ಬಳಿಕ ಬಳ್ಳಾರಿಯಿಂದ ತೆರಳಿದ ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ಮತ್ತೊಂದು ಬೋಟ್ ಮೂಲಕ ತೆರಳಿ ಎಂಟು ಜನರನ್ನು ರಕ್ಷಣೆ ಮಾಡಿದ್ದಾರೆ.

ಇನ್ನೂ ಬಳ್ಳಾರಿ ತಾಲೂಕಿನಲ್ಲಿ ಹಗರಿ ನದಿ ಪ್ರವಾಹವನ್ನು ಸೃಷ್ಟಿಸಿದೆ.ಸಾವಿರಾರು ಎಕರೆ ಭತ್ತ. ಜೋಳ. ಟೊಮೆಟೋ ಸೇರಿ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಬಸರಕೋಡು, ಮೋಕಾ, ಪರಮದೇವನಹಳ್ಳಿ, ಸಿಂದವಾಳ, ವಣೇನೂರು ಗ್ರಾಮಗಳ ಜಮೀನು, ಮನೆಗಳಿಗೆ ನೀರು ನುಗ್ಗಿದೆ. ಬಸರಕೋಡು ಗ್ರಾಮ ಹಗರಿ ನದಿಯ ನೀರಿನಿಂದ ಜಲಾವೃತಗೊಂಡಿದೆ.ಮನೆಗಳಿಗೆ ನೀರು ನುಗ್ಗಿದೆ. ಜಿಲ್ಲಾಡಳಿತದಿಂದ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಿರುಗುಪ್ಪ ತಾಲೂಕಿನ ರಾರಾವಿ ಬಳಿಯ ಸೇತುವೆ ಮುಳುಗಡೆಯಾಗಿದ್ದರಿಂದ ಸಂಪರ್ಕ ಕಡಿತಗೊಂಡಿದೆ.ಪದವಿ ವಿದ್ಯಾರ್ಥಿಗಳ ಪರೀಕ್ಷೆ ಬರೆಯಲು ನೂರಾರು ವಿದ್ಯಾರ್ಥಿಗಳು ಪರದಾಡಬೇಕಾಯ್ತು.ಈ ಬಗ್ಗೆ ಪವರ್ ಟಿವಿಯಲ್ಲಿ ವರದಿ ಪ್ರಸಾರದ ಬಳಿಕ ಎಚ್ಚೆತ್ತ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಗುರುವಾರದ ಪರೀಕ್ಷೆಯನ್ನು ಇದೇ 21ಕ್ಕೆ ಮುಂದೂಡಿದೆ.

ಕೊಪ್ಪಳದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಯ ಆವರಣ ಕೆರೆಯಂತಾಗಿದೆ‌. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಉಲ್ಬಣವಾಗುತ್ತಿದ್ದು, ಶಾಲೆಗೆ ಬರಲು ಮಕ್ಕಳು ಹರಸಾಹಸ ಪಡುತ್ತಿದ್ದಾರೆ.

ಇನ್ನೂ ಈ ಸಮಸ್ಯೆ ನೋಡೋದಾದ್ರೆ ಇತ್ತೀಚೆಗೆ ಶಾಲೆಯ ಕಾಂಪೌಂಡ್ ಹಿಂದೆ ರೈಲ್ವೆ ಹಳಿ ಹಾದು ಹೋಗಿದ್ದು ಅಲ್ಲಿ ಒಂದು ತಡೆಗೋಡೆಯನ್ನು ಕಟ್ಟಲಾಗಿದೆ‌‌. ಆದರೆ ಮಳೆ ನೀರು ಹೊರ ಹೋಗಲು ವ್ಯವಸ್ಥೆ ಮಾಡಿಲ್ಲ. ಇದೇ ಅವಾಂತರಕ್ಕೆ ಕಾರಣವಾಗಿದೆ.

ಬಸವರಾಜ್ ಹರನಹಳ್ಳಿ ಪವರ್ ಟಿವಿ,ಬಳ್ಳಾರಿ.

RELATED ARTICLES

Related Articles

TRENDING ARTICLES