ಭಾರತದಾದ್ಯಂತ 75ನೇ ಸ್ವಾತಂತ್ರ್ಯ ದಿನಚರಣೆಯ ಆಚರಣೆಗೆ ಸಿದ್ದತೆ ಭರದಿಂದ ನಡೆಯುತ್ತಿದ್ದು, ಬಿಜೆಪಿ ಸರ್ಕಾರವು ಹರ್ ಘರ್ ತಿರಂಗಾ ಎಂಬ ಆಚರಣೆ ಮೂಲಕ ಪ್ರತಿಯೊಬ್ಬರ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಬೇಕೆಂಬ ಹೊಸ ಕಾರ್ಯಕ್ರಮ ಮಾಡಿದೆ. ಇದಕ್ಕೆ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಯ ಮೇಲೆ ಆಕ್ರೋಶ ಹೊರಹಾಕಿದೆ.
ರಾಷ್ಟ್ರಧ್ವಜವನ್ನು ಬಿಜೆಪಿಯವರು ಕರ್ಚಿಫ್ನಂತೆ ಭಾವಿಸಿದ್ದಾರೆ. ಸ್ವಾಭಿಮಾನದ ಸಂಕೇತವಾದ ತಿರಂಗಾಕ್ಕೆ ಅದರದ್ದೇ ಗೌರವ, ನೀತಿ, ನಿಯಮಗಳಿವೆ, ಮತ್ತು ಜನಸಾಮಾನ್ಯರು ದೋಷಪೂರಿತ ಧ್ವಜಗಳನ್ನು ಹಾರಿಸಿದಲ್ಲಿ ಅದರ ಹೊಣೆಯನ್ನು ಅವರ ಪಾಲಿನ ಶಿಕ್ಷೆಯನ್ನು ಬಿಜೆಪಿ ಹೋರುತ್ತದೆ ಎಂದು ಪ್ರಶ್ನಿಸಿದ್ದು, ಧ್ವಜವನ್ನು ಟವೆಲ್ಗಿಂತಲೂ ಕಳಪೆಯಾಗಿ ತಯಾರಿಸಿ, ಲಕ್ಷಾಂತರ ದೋಷಪೂರಿತ ರಾಷ್ಟ್ರಧ್ವಜಗಳನ್ನು ವಿತರಿಸುತ್ತಿದೆ.
ದೇಶಭಕ್ತಿಯನ್ನು ವ್ಯಾಪಾರದ ಸರಕು ಎಂದುಕೊಂಡಿರುವ ಬಿಜೆಪಿಯು ತೆಗೆದುಕೊಳ್ಳುವ ನಿರ್ಧಾರಗಳಿಗೆ ರಾಷ್ಟ್ರಧ್ವಜದ ಘನತೆ ಮಣ್ಣು ಪಾಲಾಗಿದೆ. ಮತ್ತು ಕೇವಲ ವ್ಯಾಪಾರಕ್ಕಾಗಿ ಗೌರವದ ಸಂಕೇತವಾದ ಧ್ವಜಕ್ಕೆ ಅಪಚಾರ ಎಸಗುತ್ತಿರುವ ಬಿಜೆಪಿಯವರು ಗಾಂಪರ ಗುಂಪಿನವರು ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.


