ಒಂದು ತಿಂಗಳ ಹಿಂದಷ್ಟೇ ಭಾಮಾ ಹರೀಶ್ ಬಣ ಕರ್ನಾಟಕ ಫಿಲ್ಮ್ ಚೇಂಬರ್ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದ್ರೀಗ ವಿರೋಧಿ ಬಣದ ಸಾರಾ ಗೋವಿಂದು ಅವ್ರು ಯಾವುದೇ ಶಾಸನಾತ್ಮಕ ಹಾಗೂ ಆರ್ಥಿಕ ತೀರ್ಮಾನಗಳು ತೆಗೆದುಕೊಳ್ಳದಂತೆ ಚೇಂಬರ್ನ ಕಟ್ಟಿ ಹಾಕಿದ್ದಾರೆ. ಅದ್ಯಾಕೆ ಅನ್ನೋದ್ರ ಜೊತೆ ಇಂಡಸ್ಟ್ರಿಗೆ ಆಗಲಿರೋ ತೊಂದರೆಗಳೇನು ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ ನೋಡಿ.
ಫಿಲ್ಮ್ ಚೇಂಬರ್ ಕಾರ್ಯಗಳಿಗೆ ಸಾ.ರಾ. ಗೋವಿಂದು ಬ್ರೇಕ್
ಚುನಾವಣೆ ಮುಗಿದ್ಮೇಲೆ ಕಿರಿಕ್ ಶುರು ಮಾಡಿದ್ರಾ ಮಾಜಿ..?
‘ಗೋವಿಂದು ಅವರ ಹೆಸರಿಗೆ ಶೋಭೆ ತರುವ ವಿಚಾರ ಇದಲ್ಲ’
‘ಪವರ್’ ಜೊತೆ ಸುಂದರ್ ರಾಜ್, ಭಾಮಾ ಹರೀಶ್ ಮಾತು

ಕನ್ನಡ ಚಿತ್ರರಂಗದ ಹೆಡ್ ಆಫೀಸ್ ಅಂದ್ರೆ ಒನ್ ಅಂಡ್ ಓನ್ಲಿ ಫಿಲ್ಮ್ ಚೇಂಬರ್. ದಶಕಗಳ ಇತಿಹಾಸ ಹೊಂದಿರೋ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಕೊರೋನಾದಿಂದ ತಡವಾಗಿತ್ತು. ಇತ್ತೀಚೆಗೆ ಮೇ 28ರಂದು ನಡೆದ ಎಲೆಕ್ಷನ್ನಲ್ಲಿ ಸಾರಾ ಗೋವಿಂದು ಬಣದ ವಿರುದ್ಧ ಗರಿಷ್ಠ ಮತಗಳ ಅಂತರದಿಂದ ಭಾಮಾ ಹರೀಶ್ ತಂಡ ಗೆಲುವು ಸಾಧಿಸಿತು. ನಂತ್ರ ಅಧಿಕಾರ ಕೂಡ ಸ್ವೀಕರಿಸಿತು. ಆದ್ರೀಗ ಅವ್ರ ಕಾರ್ಯಕಲಾಪಗಳಿಗೆ ತಡೆಗೋಡೆ ಕಟ್ಟೋ ಮೂಲಕ ಕಾನೂನಿನಾತ್ಮಕವಾಗಿ ಯುದ್ಧ ಸಾರಿದ್ದಾರೆ ವಿರೋಧಿ ಬಣದ ಸಾ.ರಾ ಗೋವಿಂದು.

ಚುನಾವಣೆ ಬೈಲಾ ಪ್ರಕಾರ ನಡೆದಿಲ್ಲ ಅಂತ ಚಕಾರ ಎತ್ತಿರೋ ಸಾ.ರಾ ಗೋವಿಂದು, ಚುನಾವಣಾಧಿಕಾರಿ ಹಾಗೂ ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷ ಭಾಮಾ ಹರೀಶ್- ಕಾರ್ಯದರ್ಶಿ ಸುಂದರ್ರಾಜ್ಗೆ ನೋಟಿಸ್ ಕಳುಹಿಸಿದ್ದಾರೆ. ಡಿಆರ್ ಕಚೇರಿಯಿಂದ ನೋಟಿಸ್ ಬಂದಿದ್ದು, ಅದ್ರ ಪ್ರಕಾರ ಡಿಸಿ ಅವ್ರು ಇಬ್ಬರನ್ನೂ ಕರೆಸಿ, ವಾದ- ಪ್ರತಿವಾದಗಳನ್ನು ಕೇಳಿದ್ದಾರೆ. ಆದಾಗ್ಯೂ ಸಹ ಚುನಾವಣೆಗೆ ಸಂಬಂಧಪಟ್ಟ ಎಲ್ಲವನ್ನೂ ಮರು ಪರಿಶೀಲನೆ ಮಾಡೋವರೆಗೂ ಯಾವುದೇ ಶಾಸನಾತ್ಮಕ ಹಾಗೂ ಆರ್ಥಿಕ ತೀರ್ಮಾನಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಚೇಂಬರ್ಗೆ ಜಿಲ್ಲಾ ನೋಂದಾಣಾಧಿಕಾರಿಗಳು ಮಧ್ಯಂತರ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಪವರ್ ಟಿವಿ ಮೂಲಕ ಅಸಮಾಧಾನ ವ್ಯಕ್ತಪಡಿಸಿರೋ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್ ಹಾಗೂ ಸುಂದರ್ ರಾಜ್, ನಾವೆಲ್ಲಾ ಚಿತ್ರರಂಗಕ್ಕೆ ಒಳ್ಳೆಯದನ್ನು ಬಯಸುವವರು. ಸಾರಾ ಗೋವಿಂದು ಮೇಲೆ ಅಪಾರ ಗೌರವವಿದೆ. ಅವ್ರು ಆಶೀರ್ವಾದ ಮಾಡಿ, ಸಲಹೆ ಸೂಚನೆಗಳನ್ನು ನೀಡಬೇಕು. ಹೀಗೆ ಕಾಲೆಳೆಯಬಾರದು ಎಂದಿದ್ದಾರೆ. ಅಷ್ಟೇ ಅಲ್ಲ, ಅವ್ರ ಘನತೆಗೆ ಶೋಭೆ ತರುವ ವಿಚಾರ ಇದಲ್ಲ. ನಾವು ಕಾನೂನಿನಾತ್ಮಕ ಹೋರಾಟ ಮಾಡ್ತೇವೆ ಎಂದಿದ್ದಾರೆ.

ಒಟ್ಟಾರೆ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಈ ರೀತಿಯ ವ್ಯಾಜ್ಯ ಹೊಸದಾಗಿ ತಲೆ ಎತ್ತಿದ್ದು, ಇದ್ರಿಂದ ಟೈಟಲ್ ಕಮಿಟಿ, ರೆಡಿಯಾದ ಸಿನಿಮಾಗಳ ಎನ್ಓಸಿ ಸೇರಿದಂತೆ ಎಲ್ಲಾ ವಿಚಾರಗಳಿಗೆ ತೊಂದರೆ ಆಗ್ತಿದೆ. ನಿರ್ಮಾಪಕರಿಗೆ, ಶೂಟಿಂಗ್ಗೆ ತೊಂದರೆ ಆಗಬಾರದು ಅಂದ್ರೆ ಶಿವರಾಜ್ಕುಮಾರ್, ರವಿಚಂದ್ರನ್ರಂತಹ ಹಿರಿಯ ನಟರು ಬಂದು ಈ ಬಿಕ್ಕಟ್ಟನ್ನು ಬಗೆಹರಿಸಬೇಕಿದೆ. ಸಾರಾ ಗೋವಿಂದು ಸಹ ಹೊಸಬರಿಗೆ ಅವಕಾಶ ಮಾಡಿಕೊಟ್ಟು, ಮಾರ್ಗದರ್ಶಕರಾಗಿ ಮುಂದುವರೆಯಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ


