ಬೆಂಗಳೂರು : ಬಿಜೆಪಿಯವರಿಗೆ ಕಾನ್ವೆಂಟ್‌ನಲ್ಲಿ ಓದುವ ದಲಿತರು ಇಷ್ಟವಿಲ್ವಾ? ಬಿಜೆಪಿಯವರಿಗೆ ಯಾವ ರೀತಿಯ ದಲಿತರು ಇಷ್ಟ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸವಾಲೆಸೆದಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಚರಂಡಿ ಎತ್ತುವ ದಲಿತರು ಇಷ್ಟವೇ? ದಲಿತರು ಎಲ್ಲಿ ಇರಬೇಕು ಎಂದು ಬಯಸುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಿಯಾಂಕ್ ಖರ್ಗೆ ಕಾನ್ವೆಂಟ್ ದಲಿತ ಎಂದು ಸಚಿವ ಸುನೀಲ್ ಕುಮಾರ್ ಹೇಳಿಕಗೆ ಪ್ರತಿಕ್ರಿಯಿಸಿ, ನನ್ನ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ. ಕಾನ್ವೆಂಟ್ ದಲಿತ ಅಂತ ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳನ್ನು ಮಂತ್ರಿಗಳಿಗೆ ಬಿಜೆಪಿ ಐಟಿ ಸೆಲ್ ಹೇಳಿಕೊಡುತ್ತಾ? ಏಕೆ ದಲಿತರು ಬೆಂಗಳೂರಲ್ಲಿ ಹುಟ್ಟಬಾರದಾ? ಮೈಸೂರು ದಲಿತರು ಬೇರೆ, ಬೆಂಗಳೂರು ದಲಿತರು ಬೇರೆಯಾ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ವೈಯಕ್ತಿಕ ಟೀಕೆ ಮಾಡುವುದು ನಿಮ್ಮ ಸ್ಟ್ರಾಟಜಿ. ನೀವು ಎಷ್ಟೇ ವೈಯಕ್ತಿಕ ಟೀಕೆ ಮಾಡಿದರೂ ನಾನು ಪ್ರಶ್ನೆ ಮಾಡುವುದನ್ನು ನಿಲ್ಲಿಸುವುದಿಲ್ಲ. ನಮ್ಮ ಸರಳ ಪ್ರಶ್ನೆಗಳಿಗೆ ಉತ್ತರ ಕೊಡೋದಕ್ಕೆ ಬಿಜೆಪಿಯವರಿಗೆ ಯೋಗ್ಯತೆ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಚಾಟಿ ಬೀಸಿದ್ದಾರೆ.


