ನವದೆಹಲಿ : ವಿದೇಶಿ ಪ್ರವಾಸದಿಂದ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ ಸತತ ಸಭೆಗಳನ್ನು ನಡೆಸಿ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಬಿಸಿ ಗಾಳಿ ಹಾಗೂ ಮುಂಗಾರು ಸಿದ್ಧತೆ ಕುರಿತು ಸಭೆ ನಡೆಸಿದ ಮೋದಿ, ಬಳಿಕ ದೇಶದಲ್ಲಿನ ಗೋಧಿ ಪೂರೈಕೆ, ದಾಸ್ತಾನು ಹಾಗೂ ರಫ್ತಿನ ಪರಿಸ್ಥಿತಿ ಕುರಿತು ಮೋದಿ ಪರಿಶೀಲನಾ ಸಭೆ ನಡೆಸಿದ್ದಾರೆ. ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಕೃಷಿ ಬೆಳೆ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಇನ್ನೂ ಹೆಚ್ಚಾಗುತ್ತಿರುವ ತಾಪಮಾನ ಬೆಳೆಗಳ ಮೇಲೆ ಪರಿಣಾಮ ಬೀರಿದೆ. 2022ರ ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಹೆಚ್ಚಿನ ತಾಪಮಾನದ ಪರಿಣಾಮ ಕೃಷಿ ಬೆಳೆ ಹಾಗೂ ಉತ್ಪನ್ನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ಮೋದಿಗೆ ವಿವರಿಸಿದ್ದಾರೆ.
ಸದ್ಯ ಭಾರತದಲ್ಲಿನ ಗೋಧಿ ಉತ್ಪಾದನೆ, ದಾಸ್ತಾನು ಸಂಗ್ರಹ ಹಾಗೂ ರಫ್ತುಗಳ ಮಾಹಿತಿಯನ್ನು ಮೋದಿ ಪರಿಶೀಲಿಸಿದರು. ಇದೇ ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಭಾರತದ ಆಹಾರ ಧಾನ್ಯ ಮತ್ತು ಇತರ ಬೆಳೆಗಳ ಬೇಡಿಕೆ ಹೆಚ್ಚಾಗಿರುವ ಕಾರಣ, ಅಂತಾರಾಷ್ಟ್ರೀಯ ಮಾನದಂಡ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಂತೆ ಮೋದಿ ನಿರ್ದೇಶನ ನೀಡಿದ್ದಾರೆ.


