ಸರ್ಕಾರದ ಜಾಣ ನಡೆಗೆ ರೇವಣ್ಣ, ಪ್ರೀತಂ ಸೈಲೆಂಟ್

ಹಾಸನ : ಭಾರಿ ವಿವಾದಕ್ಕೀಡಾಗಿದ್ದ ಜಾಗವನ್ನು ಟ್ರಕ್ ಟರ್ಮಿನಲ್‌ಗೇ ಸರ್ಕಾರ ಮೀಸಲಿಟ್ಟ ಜಾಗದಲ್ಲಿ ಯಾವುದೇ ಕೆಲಸ ಕಾರ್ಯ ಮಾಡದಂತೆ ಆದೇಶ ಮಾಡಲಾಗಿದ್ದು. ಜಾಗ ನಮಗೇ ಬೇಕು ಅಂತಾ ನ್ಯಾಯಾಲದ ಮೊರೆ ಹೋದ ಗ್ರಾಮಸ್ಥರು ಹೀಗಾಗಿ ಟ್ರಕ್ ಟರ್ಮಿನಲ್ ದಂಗಲ್‌ಗೆ ಸರ್ಕಾರ ಬ್ರೇಕ್ ಹಾಕಿದೆ.

ನಗರದ ಹೊರವಲಯದಲ್ಲಿರೋ ಹೇಮಗಂಗೋತ್ರಿ ಬಳಿ ಟ್ರಕ್ ಟರ್ಮಿನಲ್ ನಿರ್ಮಾಣ ವಿಚಾರದಲ್ಲಿ ಉಂಟಾಗಿದ್ದ ಗೊಂದಲಕ್ಕೆ ಸರ್ಕಾರ ತೆರೆ ಎಳೆಯೋ ಪ್ರಯತ್ನ ಮಾಡಿದೆ.‌ ಕೆಂಚಟ್ಟಹಳ್ಳಿ ಗ್ರಾಮದ ಸರ್ವೇ ನಂಬರ್ 31 ರಲ್ಲಿ 3 ಎಕರೆ 24 ಗುಂಟೆ ಸರ್ಕಾರಿ ಗೋಮಾಳವನ್ನು ಟ್ರಕ್ ಟರ್ಮಿನಲ್‌ ಉದ್ದೇಶಕ್ಕಾಗಿ ಕಾಯ್ದಿರಿಸಲು ಸರ್ಕಾರದ ಪೂರ್ವಾನುಮತಿ ನೀಡಲಾಗಿದೆ ಅಂತಾ ಸರ್ಕಾರದ ಉಪ ಕಾರ್ಯದರ್ಶಿ ಕವಿತಾ ರಾಣಿ ಆದೇಶ ಹೊರಡಿಸಿದ್ದಾರೆ.

ಅಲ್ಲದೆ, ಸದರಿ‌ ಜಮೀನನ್ನು ಕಂದಾಯ ಇಲಾಖೆ ವ್ಯಾಪ್ತಿಯಲ್ಲಿಯೇ ಇಟ್ಟುಕೊಂಡು, ಮುಂದೆ ಯಾವುದಾದರೂ ಇಲಾಖೆಗೆ ಅಥವಾ ಸಂಸ್ಥೆಗೆ ನೀಡಬೇಕಾದಲ್ಲಿ ಸರ್ಕಾರದ ಅನುಮತಿಗೆ ಸೂಕ್ಷ್ಮ ಪ್ರಸ್ತಾವನೆ ಸಲ್ಲಿಸುವಂತೆ ಸರ್ಕಾರಕ್ಕೆ ತಿಳಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ. ಇತ್ತ ಗ್ರಾಮಸ್ಥರು ಜಾಗ ನಮಗೇ ಬೇಕು ಅಂತಾ ಕೋರ್ಟ್ ಮೊರೆ ಹೋಗಿದ್ದಾರೆ.

ಇನ್ನು ರಾಜಕೀಯ ಜಿದ್ದಾಜಿದ್ದಿನಲ್ಲಿ ಇಬ್ಬರಿಗೂ ಅನ್ಯಾಯವಾಗದಂತೆ ಸರ್ಕಾರ ನೋಡಿಕೊಂಡಿದೆ. ಆದ್ರೂ ತಕ್ಷಣಕ್ಕೆ ಕಾಮಗಾರಿಯನ್ನು ಆರಂಭ ಮಾಡದೇ ಇದ್ರೂ, ಜಾಗವನ್ನು ಟ್ರಕ್ ಟರ್ಮಿನಲ್‌ಗೆ ಕೊಡಿಸುವಲ್ಲಿ ಸ್ಥಳೀಯ ಶಾಸಕ ಪ್ರೀತಂಗೌಡ ಯಶಸ್ವಿಯಾಗಿದ್ದಾರೆ. ಇಬ್ಬರು ನಾಯಕರ ಫೈಟ್‌ನಲ್ಲಿ ನಮ್ಮದೇ ಗೆಲುವು‌ ಅಂತಾ ಇಬ್ಬರೂ ಬೆನ್ನು ತಟ್ಕೋತಾ ಇದ್ದಾರೆ. ಜಾಗವನ್ನ ಟ್ರಕ್ ಟರ್ಮಿನಲ್ ಬಿಡಿಸಿದ್ದೇ ನಮ್ಮ‌ ನಾಯಕ ಅಂತಾ ಪ್ರೀತಂಗೌಡ ಬೆಂಬಲಿಗರು ಹರ್ಷ ವ್ಯಕ್ತಪಡಿಸ್ತಾ ಇದ್ರೆ, ಇತ್ತ ರೇವಣ್ಣ ಬೆಂಬಲಿಗರು ಕಾಮಗಾರಿ ನಡೆಯಲು ಬಿಡಲಿಲ್ಲ, ನಮ್ಮದೇ ಗೆಲುವು ಅಂತಾ ಸಂತೋಷಗೊಂಡಿದ್ದಾರೆ. ಇತ್ತ ಕಾಂಗ್ರೆಸ್ ಮುಖಂಡರೂ ಕೂಡಾ‌ ಸುದ್ದಿಗೋಷ್ಠಿ ಮಾಡಿ, ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದೆ, ಹೇಮಗಂಗೋತ್ರಿ ಅಥವಾ ಊರಿಗೇ ಉಳಿಸೋದಕ್ಕೆ ನಿರ್ದೇಶನ ನೀಡುತ್ತೆ ಅಂತಿದ್ದಾರೆ.

ಅದುವಲ್ಲದೇ, ಈವರೆಗೂ ಜಿಲ್ಲಾಧಿಕಾರಿ ಕೈಯಲ್ಲಿದ್ದ ಗೋಮಾಳ ಜಾಗ, ಈಗ ಸರ್ಕಾರದ ಅಂಗಳಕ್ಕೆ ಹೋಗಿದೆ. ಅಂದು ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಜಟಾಪಟಿಯಾದಾಗಿನಿಂದ ಸ್ಥಳದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಜಿಲ್ಲಾಧಿಕಾರಿ‌ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಈಗ ಸರ್ಕಾರದ ಆದೇಶ ಕೂಡಾ ಯಥಾಸ್ಥಿತಿ ಕಾಪಾಡೋ ಮಾದರಿಯಲ್ಲಿಯೇ ಇದ್ದು, ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.

RELATED ARTICLES

Related Articles

TRENDING ARTICLES