ಶಿವಮೊಗ್ಗ: ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದೆ ಷಡ್ಯಂತ್ರ ಇದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ದುರುದ್ದೇಶಪೂರ್ವಕವಾಗಿ ಸಚಿವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ ಎಂದಿದ್ದಾರೆ. ಘಟನೆ ಕುರಿತು ತನಿಖೆ ನಡೆದ ನಂತರವಷ್ಟೇ ನಿಜ ಹೊರಬರಲು ಸಾಧ್ಯ. ಹೀಗಾಗಿ ರಮೇಶ್ ಜಾರಕಿಹೊಳಿಯ ರಾಜೀನಾಮೆ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಪ್ರಕರಣದ ಕುರಿತು ಪಕ್ಷದ ವರಿಷ್ಠರು ಗಮನ ಹರಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಿಡಿ ಪ್ರಕರಣದ ಮೂಲಕ ಜಾರಕಿಹೊಳಿಯನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಮೇಲ್ನೋಟಕ್ಕೆ ಇದು ಸತ್ಯಕ್ಕೆ ದೂರವಾದ ಘಟನೆ ಎಂದು ಅನಿಸುತ್ತಿದೆ. ಹಾಗಾಗಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುವ ಪ್ರಶ್ನೆ ಬರುವುದಿಲ್ಲ. ಉಪ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಲಿದೆ.
ಮೀಸಲಾತಿ ವಿಷಯದಲ್ಲಿ ಸರ್ಕಾರ ಈಗಾಗಲೇ ಸಮಿತಿ ರಚಿಸಿದ್ದು, ವರದಿ ಬಂದ ನಂತರ ಕ್ರಮ ಜರುಗಿಸಲಿದೆ. ಯಾವ ಯಾವ ಸಮುದಾಯದಕ್ಕೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂದು ಸರ್ಕಾರ ತೀರ್ಮಾನಿಸಲಿದ್ದು, ಒಕ್ಕಲಿಗರೂ ಸೇರಿದಂತೆ, ಎಲ್ಲಾ ಸಮುದಾಯದ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕಿದೆ.


