ಟೆಲ್ ಅವೀವ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಲು ಕೋ-ಪೈಲಟ್ ಸ್ಕೆಚ್: ಆಕಾಶದಲ್ಲೇ ಜೆಟ್ ಉಡಾಯಿಸಲು ಸಜ್ಜಾಗಿದ್ದ ಇಸ್ರೇಲ್ ವಾಯುಪಡೆ

ಬೆಂಗಳೂರು, ಅಕ್ಟೋಬರ್ 6, 2026:

ಟೆಲ್​ ಅವೀವ್, ಅಕ್ಟೋಬರ್ 06: 170ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಫ್ಲೈದುಬೈ ವಿಮಾನವನ್ನು ಅಗತ್ಯವಿದ್ದರೆ ಹೊಡೆದುರುಳಿಸಲು ಇಸ್ರೇಲ್ ಸಿದ್ಧವಾಗಿತ್ತು ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ. ವಿಮಾನದಲ್ಲಿ ಹೆಚ್ಚಿನವರು ಇಸ್ರೇಲಿ ಪ್ರಯಾಣಿಕರಾಗಿದ್ದರು ಎನ್ನಲಾಗಿದೆ. ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ (FZ1073) ವಿಮಾನದಲ್ಲಿ ಸಹ-ಪೈಲಟ್ ವಿಮಾನವನ್ನು ಅಪಹರಿಸಿ ಆತ್ಮಹತ್ಯಾ ದಾಳಿ ನಡೆಸಲು ಯತ್ನಿಸಿದಾಗ, ತನ್ನ ದೇಶದ ರಕ್ಷಣೆಗಾಗಿ 170ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಆ ವಿಮಾನವನ್ನೇ ಆಕಾಶದಲ್ಲೇ ಹೊಡೆದುರುಳಿಸಲು ಇಸ್ರೇಲ್ ಸಿದ್ಧತೆ ನಡೆಸಿತ್ತು ಎಂಬ ಆಘಾತಕಾರಿ ಮಾಹಿತಿ ಸಿಬಿಎಸ್ ನ್ಯೂಸ್ ವರದಿಯಿಂದ ಬಹಿರಂಗವಾಗಿದೆ.

ದುಬೈನಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ FZ1073 ವಿಮಾನದಲ್ಲಿ ಒಮಾನಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮೇಲೆ ದಾಳಿ ನಡೆಸಿದ ಘಟನೆ ಬಳಿಕ ಈ ಬೆಳವಣಿಗೆ ನಡೆದಿದೆ. ವಿಮಾನವು ಜೋರ್ಡಾನ್ ವಾಯುಪ್ರದೇಶದ ಸಮೀಪದಲ್ಲಿದ್ದಾಗ ಪರಿಸ್ಥಿತಿ ಗಂಭೀರವಾಗಿತ್ತು ಎಂದು ವರದಿಯಾಗಿದೆ.

18,000 ಅಡಿ ಕುಸಿದ ವಿಮಾನ

ವರದಿಯ ಪ್ರಕಾರ, ವಿಮಾನ ಕೆಲವೇ ಕ್ಷಣಗಳಲ್ಲಿ ಸುಮಾರು 18,000 ಅಡಿ ಎತ್ತರ ಕಳೆದುಕೊಂಡಿತ್ತು. ಕಾಕ್‌ಪಿಟ್‌ನಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಇಸ್ರೇಲಿ ಅಧಿಕಾರಿಗಳು ತುರ್ತು ಕಾರ್ಯವಿಧಾನವನ್ನು ಜಾರಿಗೆ ತಂದರು.

ಪ್ರಮುಖ ಅಂಶಗಳು

  • ದುಬೈನಿಂದ ಇಸ್ರೇಲ್‌ನ ಟೆಲ್ ಅವಿವ್‌ಗೆ ಹೊರಟಿದ್ದ ಫ್ಲೈದುಬೈ (FZ1073) ವಿಮಾನದಲ್ಲಿ ಸಹ-ಪೈಲಟ್ ವಿಮಾನವನ್ನು ಅಪಹರಿಸಿ ಆತ್ಮಹತ್ಯಾ ದಾಳಿ ನಡೆಸಲು ಯತ್ನಿಸಿದಾಗ, ತನ್ನ ದೇಶದ ರಕ್ಷಣೆಗಾಗಿ ವಿಮಾನವು ಜೋರ್ಡಾನ್ ವಾಯುಪ್ರದೇಶದ ಸಮೀಪದಲ್ಲಿದ್ದಾಗ ಪರಿಸ್ಥಿತಿ ಗಂಭೀರವಾಗಿತ್ತು ಎಂದು ವರದಿಯಾಗಿದೆ. 
  • ಕಾಕ್‌ಪಿಟ್‌ನಿಂದ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಇಸ್ರೇಲಿ ಅಧಿಕಾರಿಗಳು ತುರ್ತು ಕಾರ್ಯವಿಧಾನವನ್ನು ಜಾರಿಗೆ ತಂದರು.

ಇಸ್ರೇಲ್ ವಾಯುಪಡೆ ಫೈಟರ್ ಜೆಟ್‌ಗಳನ್ನು ಸಜ್ಜುಗೊಳಿಸಿತು. ವಿಮಾನವನ್ನು ಗಮನಿಸಲು ಮತ್ತು ಪರಿಸ್ಥಿತಿಯನ್ನು ಪರಿಶೀಲಿಸಲು ಜೆಟ್‌ಗಳನ್ನು ಕಳುಹಿಸುವ ಸಿದ್ಧತೆ ನಡೆಯಿತು. ಇಸ್ರೇಲಿ ವಾಯುಪ್ರದೇಶದ ಭದ್ರತೆಯನ್ನೂ ಬಿಗಿಗೊಳಿಸಲಾಯಿತು ಎಂದು ವರದಿಯಾಗಿದೆ.

ಪ್ರಯಾಣಿಕರ ರಕ್ಷಣೆಗೆ ಸ್ಮಿತ್ ಹೋರಾಟ

ಇದೇ ವೇಳೆ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಾಯಗೊಂಡಿದ್ದರೂ ಸಹ-ಪೈಲಟ್‌ನೊಂದಿಗೆ ಹೋರಾಟ ಮುಂದುವರಿಸಿದರು.

ಅವರು ಕಾಕ್‌ಪಿಟ್ ಬಾಗಿಲನ್ನು ತೆರೆಯಲು ಸಾಧ್ಯವಾದ ಬಳಿಕ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳಗೆ ಪ್ರವೇಶಿಸಿದರು. ಕೆಲ ಇಸ್ರೇಲಿ ಪ್ರಯಾಣಿಕರು ಮತ್ತು ಫ್ಲೈದುಬೈ ಸಿಬ್ಬಂದಿ ಸಹ-ಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ನೆರವಾದರು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ. ನಂತರ ವಿಮಾನದಲ್ಲಿದ್ದ ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ನಿಯಂತ್ರಣಕ್ಕೆ ಬಂದು ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಿದರು.

ವಿಮಾನವನ್ನು ಹೊಡೆದುರುಳಿಸುವ ನಿರ್ಧಾರ ಯಾರದ್ದು?

ಸಿಬಿಎಸ್ ನ್ಯೂಸ್‌ ವರದಿ ಪ್ರಕಾರ, ಇಸ್ರೇಲ್‌ನಲ್ಲಿ ಇಂತಹ ಅಪಹರಣಕ್ಕೊಳಗಾದ ವಿಮಾನ ಪರಿಸ್ಥಿತಿಗೆ ಪೂರ್ವನಿಗದಿತ ಕಾರ್ಯವಿಧಾನವಿದೆ.

ವಿಮಾನದೊಂದಿಗೆ ಸಂಪರ್ಕ ಸಾಧ್ಯವಾಗದಿದ್ದರೆ ಯುದ್ಧವಿಮಾನಗಳನ್ನು ಕಳುಹಿಸಿ ಕಾಕ್‌ಪಿಟ್ ಮತ್ತು ಪ್ರಯಾಣಿಕರ ಸ್ಥಿತಿಯನ್ನು ಪರಿಶೀಲಿಸುವ ವ್ಯವಸ್ಥೆ ಇದೆ ಎನ್ನಲಾಗಿದೆ.

ವಿಮಾನವನ್ನು ನಿಜವಾಗಿಯೂ ಅಪಹರಿಸಲಾಗಿದೆ ಮತ್ತು ಅದು ಇಸ್ರೇಲ್‌ನ ಪ್ರಮುಖ ಗುರಿಯತ್ತ ಸಾಗುತ್ತಿದೆ ಎಂದು ದೃಢಪಟ್ಟರೆ, ಮುಂದಿನ ಕ್ರಮದ ಬಗ್ಗೆ ಉನ್ನತ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿ ಹೇಳಿದೆ. ವಿಮಾನವನ್ನು ಹೊಡೆದುರುಳಿಸುವ ಅಂತಿಮ ನಿರ್ಧಾರ ಪ್ರಧಾನಿ ಮಟ್ಟದಲ್ಲಿರುತ್ತದೆ ಎಂದು ಮೂಲಗಳು ತಿಳಿಸಿವೆ. ಆದರೆ ಫ್ಲೈದುಬೈ ವಿಮಾನ ಇಸ್ರೇಲ್ ಕಡೆಗೆ ಮುಂದುವರೆಯದೆ ಸೌದಿ ಅರೇಬಿಯಾ ಕಡೆಗೆ ತಿರುಗಿದ್ದರಿಂದ ಇಸ್ರೇಲಿ ಜೆಟ್‌ಗಳು ಅಂತಿಮವಾಗಿ ದಾಳಿ ನಡೆಸಲಿಲ್ಲ ಎಂದು ವರದಿಯಾಗಿದೆ.

ಸಹ-ಪೈಲಟ್ ವಿರುದ್ಧ ತನಿಖೆ

ಕ್ಯಾಪ್ಟನ್ ಸ್ಮಿತ್ ಮೇಲೆ ದಾಳಿ ನಡೆಸಿದ ಆರೋಪ ಎದುರಿಸುತ್ತಿರುವ ಹಮಾಮ್ ಅಲ್-ಹಮ್ಮಾಮಿ ಸದ್ಯ ಯುಎಇ ಅಧಿಕಾರಿಗಳ ವಶದಲ್ಲಿದ್ದಾನೆ ಎಂದು ವರದಿಯಾಗಿದೆ.

ತನಿಖಾಧಿಕಾರಿಗಳ ಮುಂದೆ ಆತ ಫ್ಲೈದುಬೈಗೆ ಸೇರುವ ಮೊದಲೇ ದಾಳಿಯ ಯೋಜನೆ ರೂಪಿಸಿದ್ದಾಗಿ ಹೇಳಿದ್ದಾನೆ ಎಂಬ ವರದಿಗಳೂ ಬಂದಿವೆ.

ಪೈಲಟ್ ಮೇಲೆ ದಾಳಿ ನಡೆಸಿ ವಿಮಾನದ ನಿಯಂತ್ರಣ ಪಡೆದು ಬಳಿಕ ವಿಮಾನವನ್ನು ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಅಪ್ಪಳಿಸುವ ಉದ್ದೇಶ ಹೊಂದಿದ್ದ ಎಂದು ಹೇಳಲಾಗಿದೆ. ಆದರೆ ಈ ಎಲ್ಲ ವಿವರಗಳು ತನಿಖಾ ಮೂಲಗಳು ಮತ್ತು ಮಾಧ್ಯಮ ವರದಿಗಳ ಆಧಾರದಲ್ಲಿದ್ದು, ಅಂತಿಮ ತನಿಖಾ ವರದಿ ಇನ್ನೂ ಹೊರಬರಬೇಕಿದೆ.

ಹಮಾಮ್ ಅಲ್-ಹಮ್ಮಾಮಿ ಫ್ಲೈದುಬೈನಲ್ಲಿ ಸುಮಾರು ಎಂಟು ತಿಂಗಳು ಕೆಲಸ ಮಾಡಿದ್ದ ಎಂದು ಸಿಎನ್ಎನ್ ವರದಿ ಮಾಡಿದೆ. ಇದಕ್ಕೂ ಮೊದಲು ಆತ ಓಮನ್​ನಲ್ಲಿ ಏರ್‌ನಲ್ಲಿ ಸುಮಾರು ಏಳು ವರ್ಷ ಕೆಲಸ ಮಾಡಿದ್ದ ಎನ್ನಲಾಗಿದೆ.

ಘಟನೆಯ ಉದ್ದೇಶ, ದಾಳಿಯ ಹಿನ್ನೆಲೆ ಮತ್ತು ಇದರಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದರೇ ಎಂಬ ಬಗ್ಗೆ ತನಿಖೆ ಮುಂದುವರೆದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಸುದ್ದಿಗಳಿಗಾಗಿ Power TV ಜೊತೆ ಇರಿ.

RELATED ARTICLES

Related Articles

TRENDING ARTICLES