ವಾರಾಣಸಿಯಲ್ಲಿ ಅಪಾಯದ ಮಟ್ಟ ಮೀರಿದ ಗಂಗಾ ನದಿ; 84 ಘಾಟ್​​ಗಳು ಜಲಾವೃತ

ಬೆಂಗಳೂರು, ಆಗಸ್ಟ್ 31, 2026:

ವಾರಾಣಸಿ, ಆಗಸ್ಟ್ 31: ಉತ್ತರ ಪ್ರದೇಶದ ವಾರಾಣಸಿಯಲ್ಲಿ  ಗಂಗಾ ನದಿಯ ನೀರಿನ ಮಟ್ಟ ತೀವ್ರ ಗತಿಯಲ್ಲಿ ಏರಿಕೆಯಾಗಿದ್ದು, ನಗರದ ಎಲ್ಲಾ 84 ಘಾಟ್‌ಗಳು ನೀರಿನಲ್ಲಿ ಮುಳುಗಡೆಯಾಗಿವೆ. ನದಿ ತೀರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಪ್ರವಾಹ ಭೀತಿ ಎದುರಾಗಿದೆ.ಇಂದು ಗಂಗಾ ನದಿಯು 69.40 ಮೀಟರ್ ಮಟ್ಟದಲ್ಲಿ ಹರಿಯುತ್ತಿದ್ದು, ಎಚ್ಚರಿಕೆಯ ಮಟ್ಟ 70.262 ಮೀಟರ್ ಹಾಗೂ ಅಪಾಯದ ಮಟ್ಟ 71.26 ಮೀಟರ್ ಆಗಿದೆ. ಗಂಗಾ ನದಿಯ ನೀರು ಗಂಟೆಗೆ ಸುಮಾರು 4 ಸೆಂ.ಮೀ.ನಷ್ಟು ಏರಿಕೆಯಾಗುತ್ತಿದ್ದು, ನಮೋ ಘಾಟ್‌ನಲ್ಲಿರುವ ‘ನಮಸ್ತೆ’ ವಿಗ್ರಹವು ನೀರಿನಲ್ಲಿ ಮುಳುಗಿದೆ.

ದೋಣಿ ಸಂಚಾರ ನಿಷೇಧ:

ಗಂಗಾ ನದಿಯಲ್ಲಿ ನೀರಿನ ಹರಿವು ಮತ್ತು ರಭಸ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಗಂಗಾ ನದಿಯಲ್ಲಿ ದೋಣಿ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಗಂಗಾ ನದಿಯ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ವರುಣಾ ನದಿಯಲ್ಲೂ ಹಿಮ್ಮುಖ ಹರಿವು ಉಂಟಾಗಿ, ದಂಡೆಯ ಮೇಲಿರುವ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಆರಂಭಿಸಿದ್ದಾರೆ.

61 ಪರಿಹಾರ ಶಿಬಿರಗಳ ಸ್ಥಾಪನೆ:

ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ವಾರಾಣಸಿ ಜಿಲ್ಲಾಡಳಿತವು 61 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದ್ದು, ಅಲ್ಲಿ ವಸತಿ, ಆಹಾರ, ಕುಡಿಯುವ ನೀರು, ನೈರ್ಮಲ್ಯ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸದ್ಯದ ಸ್ಥಿತಿಗತಿಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು 21 ಪ್ರವಾಹ ಕಾವಲು ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ತುರ್ತು ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ 198 ದೋಣಿಗಳನ್ನು ಕಾಯ್ದಿರಿಸಲಾಗಿದೆ. NDRF, ವಾಟರ್ ಪೊಲೀಸ್ ಮತ್ತು ಬಿಎಸ್‌ಎಫ್ ಪಡೆಯ ತಂಡಗಳನ್ನು ಸನ್ನದ್ಧವಾಗಿರಿಸಲಾಗಿದೆ.

ದನಕರುಗಳಿಗೆ ಮೇವು, ನೀರು ಮತ್ತು ಆಶ್ರಯ ತಾಣಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪ್ರಸಿದ್ಧ ದಶಾಶ್ವಮೇಧ ಘಾಟ್ ಸೇರಿದಂತೆ ಪ್ರಮುಖ ಘಾಟ್‌ಗಳಲ್ಲಿ ನಡೆಯುವ ಸಾಯಂಕಾಲದ ‘ಗಂಗಾ ಆರತಿ’ಯನ್ನು ನದಿಯ ಮೆಟ್ಟಿಲುಗಳ ಬದಲಿಗೆ ಮೇಲ್ಭಾಗದ ಸುರಕ್ಷಿತ ಸ್ಥಳಗಳಲ್ಲಿ ನೆರವೇರಿಸಲಾಗುತ್ತಿದೆ. ಗಂಗಾ ನದಿಯ ದಂಡೆಯ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ. ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿರುವುದರಿಂದ ನದಿ ತೀರಕ್ಕೆ ತೆರಳದಂತೆ ಆಡಳಿತ ಮಂಡಳಿಯು ಪ್ರವಾಸಿಗರಿಗೆ ಮತ್ತು ಭಕ್ತಾದಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಹೆಚ್ಚಿನ ಸುದ್ದಿಗಳಿಗಾಗಿ Power TV ಜೊತೆ ಇರಿ.

RELATED ARTICLES

Related Articles

TRENDING ARTICLES