ಬೆಂಗಳೂರು: ದೀಪಾವಳಿ ಬಂತು ಅಂದರೆ, ಸಾಕು ಎಲ್ಲರ ಕಣ್ಣು ಅಯೋಧ್ಯೆಯತ್ತ ತಿರುಗುತ್ತದೆ. ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಇಲ್ಲಿನ ಸರಯೂ ನದಿಯ ದಡದಲ್ಲಿ ದೀಪೋತ್ಸವ ನಡೆಸುವುದು ಸಂಪ್ರದಾಯ.
ಈ ಬಾರಿ 24 ಲಕ್ಷ ದೀಪಗಳನ್ನು ಬೆಳಗುವ ಮೂಲಕ ನೂತನ ವಿಶ್ವದಾಖಲೆ ಮಾಡಲು ಅಯೋಧ್ಯೆ ಜಿಲ್ಲಾಡಳಿತ ಸಜ್ಜಾಗಿದೆ.
ಈಗಾಗಲೇ ಅಯೋಧ್ಯೆಯಲ್ಲಿ ದೀಪಗಳ ಮಾರಾಟ ಭರದಿಂದ ಸಾಗಿದೆ. ಒಂದು ದೀಪಕ್ಕೆ 51 ರೂಪಾಯಿ ಹಾಗೂ 51 ದೀಪಗಳಿಗೆ 1,100 ರೂ. ದರ ನಿಗದಿ ಪಡಿಸಲಾಗಿದೆ. ದೀಪೋತ್ಸವದ ಅಂಗವಾಗಿ ರಾಮಜನ್ಮೂಮಿಯ ಪಥವನ್ನು ಹೂವುಗಳಿಂದ ಅಲಂಕರಿಸಲಾಗಿದೆ.
ಈ ಬಾರಿಯ ದೀಪೋತ್ಸವಕ್ಕೆ ಜಾರ್ಖಂಡ್ ನ ಪಾಕುರ್ ಜಿಲ್ಲೆಯ ಬುಡಕಟ್ಟು ಜನರನ್ನು ವಿಶೇಷ ಅತಿಥಿಗಳಾಗಿ ಉತ್ತರ ಪ್ರದೇಶ ಸರ್ಕಾರ ಆಹ್ವಾನಿಸಿದೆ. ರಾವಣನನ್ನು ವಧಿಸಿದ ಬಳಿಕ ಪ್ರಭು ಶ್ರೀರಾಮಚಂದ್ರ ದೀಪಾವಳಿಯ ಸಂದರ್ಭದಲ್ಲಿಯೇ ಅಯೋಧ್ಯೆಗೆ ವಾಪಸ್ ಬಂದನೆಂದು ಶ್ರೀರಾಮನನ್ನು ಅಯೋಧ್ಯೆಯ ಜನ ಇಡೀ ನಗರವನ್ನು ದೀಪಗಳನ್ನು ಹಚ್ಚಿ ಸ್ವಾಗತಿಸಿದರೆಂದು ಪ್ರತೀತಿ ಇದೆ.


