ಬೆಂಗಳೂರು: ಬಹುಮುಖ ಪ್ರತಿಭೆಯಿಂದ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಡಾ. ಕೋಟ ಶಿವರಾಮ ಕಾರಂತರು ಇಪ್ಪತ್ತನೆಯ ಶತಮಾನ ಕಂಡ ಬಹುಮುಖದ ವ್ಯಕ್ತಿತ್ವ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಹೇಳಿದರು.
ಅವರು ಇಂದು ಡಾ. ಶಿವರಾಮ ಕಾರಂತರ 121ನೆ ಜನ್ಮದಿನದ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಟದ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ 1902 ರ ಅಕ್ಟೋಬರ್ 10 ರಂದು ಜನಿಸಿ ಶಿವರಾಮ ಕಾರಂತರು ಹರಿಜನೋದ್ಧಾರಕ, ಅಸಹಕಾರ ಚಳವಳಿಯ ಮೂಲಕ ಸ್ವಾತಂತ್ರ್ಯ ಚಳವಳಿಗಳಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.
ನೃತ್ಯ ಸಂಗೀತ, ಯಕ್ಷಗಾನ, ನಾಟಕ ರಂಗಗಳಲ್ಲಿ ನಾನಾರೀತಿ ಸೇವೆ ಸಲ್ಲಿಸಿದರು. ಅವರು ಸರ್ಕಾರ ಸೇರಿದಂತೆ ಇತರ ಯಾವುದೇ ಆಶ್ರಯವಿಲ್ಲದೇ ತಮ್ಮ ಕೆಲಸವನ್ನು ಮಾಡುತ್ತ ಬಂದವರು. ತಮ್ಮ ಜೀವನದ ಉದ್ದಕ್ಕೂ ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷೇತ್ರಗಳಲ್ಲಿ ದುಡಿದರು.,
ಇದನ್ನೂ ಓದಿ: ಪ್ಯಾಲೆಸ್ಟೈನ್ ಉಗ್ರರಿಗೆ ಕಾಂಗ್ರೆಸ್ ಬೆಂಬಲ : ಬಸವರಾಜ ಬೊಮ್ಮಾಯಿ
ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಬಿಎಂಶ್ರೀ ಸ್ಮಾರಕ ಸಂಸ್ಥೆ, ನೀನಾಸಂ ಮೊದಲಾದ ಸಂಸ್ಥೆಗಳನ್ನು ಪ್ರೋತ್ಸಾಹಿಸಿದರು, ಅನೇಕ ಸಂಸ್ಥೆಗಳಲ್ಲಿ ಸದಸ್ಯರಾಗಿ ಸಕ್ರೀಯವಾಗಿ ಸೇವೆ ಸಲ್ಲಿಸಿದವರು ಎಂದು ಡಾ. ಶಿವರಾಮ ಕಾರಂತ ಕುರಿತು ನಾಡೋಜ ಡಾ. ಮಹೇಶ ಜೋಶಿ ಅವರು ನೆನಪಿಸಿಕೊಂಡರು.
ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಡಾ. ಶಿವರಾಮ ಕಾರಂತರ ೧೨೧ನೆಯ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಪುಷ್ಪ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಡಾ. ಶಿವರಾಮ ಕಾರಂತರ ಭಾವಚಿತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಹಾಗೂ ಸಮಸ್ತ ಕನ್ನಡಿಗರ ಪರವಾಗಿ ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು, ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಬಿ.ಎಂ.ಪಾಟೀಲ್ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಪುಷ್ಪನಮನವನ್ನು ಸಲ್ಲಿಸಿದರು. ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್. ಎಸ್. ಶ್ರೀಧರ ಮೂರ್ತಿ, ವಿಶೇಷ ಕರ್ತವ್ಯಾಧಿಕಾರಿ ಶ್ರೀ ಚಿಕ್ಕತಿಮ್ಮಯ್ಯ ಸಿ. ಹಾಗೂ ಸಿಬ್ಬಂದಿಗಳು ಇದ್ದರು.


