ಬೆಂಗಳೂರು : ಡಿ.ಕೆ ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳಿಸಲು ಅಮಿತ್ ಶಾ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಒಪ್ಪಂದ ಆಗಿರಬೇಕು ಎಂದು ವಸತಿ ಸಚಿವ ಬಿ.ಝಡ್. ಜಮೀರ್ ಅಹಮ್ಮದ್ ಖಾನ್ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕುಮಾರಣ್ಣ ಮೊನ್ನೆ ಅಮಿತ್ ಶಾ ಜೊತೆ ಮೀಟಿಂಗ್ ಮಾಡಿಕೊಂಡು ಬಂದಿದ್ದಾರೆ. ಅವರಿಬ್ಬರ ನಡುವೆ ಮಾತುಕತೆ ನಡೆದಿರಬೇಕು. ಬಹುಶಃ ಅಮಿತ್ ಶಾ ಹಾಗೂ ಹೆಚ್ಡಿಕೆ ನಡುವೆ ಒಪ್ಪಂದ ಆಗಿರಬೇಕು. ಡಿಕೆಶಿನ ಜೈಲಿಗೆ ಕಳಿಸಲು ಒಪ್ಪಂದ ಆಗಿರಬೇಕು. ಅದಕ್ಕೆ ಆ ರೀತಿ ಹೇಳಿರ್ತಾರೆ ಎಂದು ಚಾಟಿ ಬೀಸಿದರು.
ಇದೇ ವೇಳೆ ಸರ್ಕಾರ ಪತನ ಗ್ಯಾರಂಟಿ ಎಂದಿರುವ ಕುಮಾರಸ್ವಾಮಿ ಹೇಳಿಕೆಗೆ ಜಮೀರ್ ಅಹ್ಮದ್ ತಿರುಗೇಟು ನೀಡಿದರು. ನಾನು ಕುಮಾರಸ್ವಾಮಿ ಜೊತೆಗೆ ಇದ್ದವನು. ಯಾವುದಾದರೂ ಸರ್ಕಾರ ಐದು ವರ್ಷ ನಡೆಯಲಿದೆ ಅಂತ ಹೇಳಿದ್ದಾರಾ? ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬಿಳುತ್ತೆ ಅಂದ್ರು. ಅಮೇಲೆ ಇವರದ್ದೇ ಸರ್ಕಾರ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ನಮ್ಮ ಸರ್ಕಾರ ಬೀಳಲು ಹೇಗೆ ಸಾಧ್ಯ ಹೇಳಿ ಎಂದು ಹೇಳಿದರು.
ಹಗಲು ಕನಸು ಕಾಣುತ್ತಿದ್ದಾರೆ
ಬಿಜೆಪಿ 104 ಶಾಸಕರು ಇದ್ದುಕೊಂಡು ಆಪರೇಷನ್ ಕಮಲ ಮಾಡಿ ನಾಲ್ಕು ವರ್ಷ ಸರ್ಕಾರ ನಡೆಸಿದ್ದರು. ಈ ನಾವು 136 ಶಾಸಕರು ಇದ್ದೇವೆ. ಕಾಂಗ್ರೆಸ್ ಸರ್ಕಾರ ಹೇಗೆ ಬಿಳುತ್ತೆ? ಕುಮಾರಸ್ವಾಮಿ ಹಗಲು ಕನಸು ಕಾಣುತ್ತಿದ್ದಾರೆ ಎಂದು ಹೆಚ್ಡಿಕೆಗೆ ಸಚಿವ ಜಮೀರ್ ಅಹಮ್ಮದ್ ತಿರುಗೇಟು ನೀಡಿದರು.


