ಸಿದ್ದರಾಮಯ್ಯ 1 ಮತ್ತು ಸಿದ್ದರಾಮಯ್ಯ 2ಗೆ ಬಹಳಷ್ಟು ವ್ಯತ್ಯಾಸ ಇದೆ : ಬೊಮ್ಮಾಯಿ

ಹಾವೇರಿ : ಸಿದ್ದರಾಮಯ್ಯ 1 ಮತ್ತು ಸಿದ್ದರಾಮಯ್ಯ 2ಗೆ ಬಹಳಷ್ಟು ವ್ಯತ್ಯಾಸ ಇದೆ. ಕಾಂಗ್ರೆಸ್​ ಸರ್ಕಾರ ಬಂದ ಮೇಲೆ ಸಂಪೂರ್ಣ ಅಭಿವೃದ್ಧಿ ನಿಂತು ಹೋಗಿದೆ. ಬಿಜೆಪಿ ಶಾಸಕರು, ಬಿಜೆಪಿ ಶಾಸಕರ ಕ್ಷೇತ್ರಗಳ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಕಿದರು.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆದಿದೆ, ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ತಾರೆ ಎನ್ನುವುದು ಸರ್ಕಾರದ ನೀತಿನಾ? ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಎಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ ಹಣ ಗ್ಯಾರಂಟಿಗೆ ಬಳಸುತ್ತಿದ್ದಾರೆ ಎಂದು ಕಿಡಿಕಾರಿದರು.

ಹಾವೇರಿ ಜಿಲ್ಲೆಯ ಕೋರ್ ಕಮಿಟಿ ಸಭೆ ಮಾಡಿದ್ದೇವೆ. ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸಲು ಚರ್ಚೆ ಮಾಡಲಾಗಿದೆ. ಬೂತ್ ಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷ ಸಂಘಟನೆ ಮಾಡಬೇಕು. ಟಿಕೆಟ್ ವಿಚಾರದ ಬಗ್ಗೆ, ಅಂತಿಮವಾಗಿ ವರಿಷ್ಟರು ತೀರ್ಮಾನ ಮಾಡುತ್ತಾರೆ ಎಂದರು.

ಅನಿಷ್ಠ ಸರ್ಕಾರದ ವಿರುದ್ಧ ಜಂಟಿ ಹೋರಾಟ

ದೇವೆಗೌಡರು ಹಾಗೂ ಅಮಿತ್ ಶಾ ಭೇಟಿ ಸ್ವಾಗತಾರ್ಹ. ಬರುವಂತ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ. ಅನಿಷ್ಠ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ಮಾಡಲು ಅವಶ್ಯಕತೆ ಇದೆ ಎನ್ನುವುದು ಎಲ್ಲರ ಭಾವನೆಯಿದೆ. ಜೆಡಿಎಸ್ ನವರು ಸಹ ಸ್ಪಷ್ಟತೆ ಹೇಳುತ್ತಿಲ್ಲ. ಅಂಕಿ ಸಂಖ್ಯೆಗಳು ಏನು ಎನ್ನುವುದು ಕೆಲವು ವಾರಗಳ ನಂತರ ಸಿಗುತ್ತದೆ ಎಂದು ಬೊಮ್ಮಾಯಿ ಹೇಳಿದರು.

ನಾನು ಅಭ್ಯರ್ಥಿ ಅಂತ ಎಲ್ಲಿಯೂ ಹೇಳಿಲ್ಲ

ಶಿವಕುಮಾರ ಉದಾಸಿ ಜೊತೆಗೆ ಮಾತನಾಡಿದ್ದೇನೆ. ರಾಷ್ಟ್ರ ರಾಜಕಾರಣಕ್ಕೆ ನಾನು ಹೋಗುತ್ತೇನೆ ಅಂತ ಹೇಳಿಲ್ಲ. ಲೋಕಸಭಾ ಚುನಾವಣೆಗೆ ಬೊಮ್ಮಾಯಿ ಸ್ಪರ್ಧೆ ವಿಚಾರ ಮಾಧ್ಯಮಗಳ ಉಹಾಪೋಹ. ನಾನು ನಿಲ್ಲುವ ಪ್ರಶ್ನೆ ಇಲ್ಲ, ಪಕ್ಷ ತೀರ್ಮಾನ ಮಾಡುತ್ತದೆ. ನಾನು ಅಭ್ಯರ್ಥಿ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.

RELATED ARTICLES

Related Articles

TRENDING ARTICLES