ಶಿವಮೊಗ್ಗ : ಸುರಿಯುತ್ತಿರುವ ಮಳೆಯಲ್ಲೇ ಮೃತಪಟ್ಟ ವ್ಯಕ್ತಿಯೊಬ್ಬರ ಅಂತ್ಯ ಸಂಸ್ಕಾರ ನಡೆಸಿರುವ ಮನಕಲುಕುವ ಘಟನೆ ಮಾಜಿ ಗೃಹ ಸಚಿವರ ಸ್ವಕ್ಷೇತ್ರ ಶಿವಮೊಗ್ಗದಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾ.ಪಂ ಬೇಜವಾಬ್ದಾರಿಯಿಂದ ಸ್ಮಶಾನದ ಮೇಲ್ಭಾಗದ ಶೀಟುಗಳು ಹಾರಿ ಹೋಗಿದೆ. ಹೀಗಾಗಿ, ಮೃತಪಟ್ಟ ವ್ಯಕ್ತಿಯನ್ನು ಕುಟುಂಬ ವರ್ಗ ಹಾಗೂ ಸ್ಥಳೀಯರು ಸುರಿಯುತ್ತಿರುವ ಮಳೆಯಲ್ಲೇ ಅಂತ್ಯ ಸಂಸ್ಕಾರ ನಡೆಸುವಂತಾಗಿದೆ.
ಈ ಸಮಸ್ಯೆ ಪ್ರತಿ ಬಾರಿ ಮಳೆಗಾಲದಲ್ಲಿ ಬರುತ್ತದೆ. ಆದರೆ, ಜನಪ್ರತಿನಿಧಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಮಡಿದವರಿಗೆ ಈ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಕೂಡ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಇದೆ ಎಂದು ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಉಕ್ಕಿ ಹರಿಯುತ್ತಿರುವ ಕುಬ್ಜಾ ನದಿಗೆ ಬಿದ್ದು ಅರ್ಚಕ ಸಾವು
ಮನಿವಿಗೂ ಎಚ್ಚೆತ್ತುಕೊಳ್ಳದ ಆಡಳಿತ
ಸ್ಮಶಾನದಲ್ಲಿ ಸೂಕ್ತ ವ್ಯವಸ್ಥೆ ಹಾಗೂ ನಿರ್ವಹಣೆ ಇಲ್ಲದೆ ಇರುವುದರಿಂದ ಈ ರೀತಿ ಸಮಸ್ಯೆ ಆಗಿದೆ. ಮಲೆನಾಡ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಜೋರಾಗಿ ಸುರಿಯುವ ಮಳೆಯಲ್ಲಿಯೇ ಮೃತರ ಅಂತ್ಯಸಂಸ್ಕಾರ ನಡೆಸಲಾಗಿದೆ. ಸ್ಮಶಾನಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸುವಂತೆ ಹಲವು ಬಾರಿ ಗ್ರಾ.ಪಂಗೆ ಮನವಿ ಮಾಡಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ ಎಂಬುದು ಸ್ಥಳಿಯರ ಆರೋಪ.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಜನರಿಗೆ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಬೇಕು. ಸ್ಮಶಾನಕ್ಕೆ ಸರಿಯಾದ ವ್ಯವಸ್ಥೆ ಮಾಡಿ ಕೊಡಬೇಕು ಎಂಬುದು ಜನರ ಒತ್ತಾಯವಾಗಿದೆ.


