ನವರಸ ನಾಯಕ ಜಗ್ಗೇಶ್, ಮೂರ್ನಾಲ್ಕು ದಶಕಗಳಿಂದ ಕನ್ನಡಿಗರನ್ನು ಹಾಸ್ಯದ ಕಡಲಲ್ಲಿ ತೇಲಿಸ್ತಾ ಬಂದಿರುವ ಕಾಮಿಡಿ ಕಿಂಗ್. ಹಾಗೆಯೇ ಡೈರೆಕ್ಟರ್ ಸುನೀಲ್ ಕುಮಾರ್ ದೇಸಾಯಿ ಸಸ್ಪೆನ್ಸ್, ಥ್ರಿಲ್ಲರ್ ಮೂವಿಗಳಿಂದ ಕನ್ನಡಿಗರನ್ನು ಸೆಳೆದವರು. ಜಗ್ಗೇಶ್ ಮತ್ತು ಸುನೀಲ್ ಕುಮಾರ್ ಸಿನಿ ವಿಚಾರದಲ್ಲಿ ತದ್ವಿರುದ್ದ..! ಆದ್ರೆ, ಈಗ ಇವರಿಬ್ಬರು ಒಟ್ಟಾಗಿ ಒಂದು ಸಿನಿಮಾ ಮಾಡೋ ಪ್ಲಾನ್ನಲ್ಲಿದ್ದಾರೆ.
ಜಗ್ಗೇಶ್ ಮತ್ತು ಸುನೀಲ್ ಕುಮಾರ್ ದೇಸಾಯಿ ಹೆಚ್ಚು-ಕಮ್ಮಿ ಒಟ್ಟೊಟ್ಟಿಗೆ ಸಿನಿರಂಗಕ್ಕೆ ಎಂಟ್ರಿಕೊಟ್ಟವರು. ಜಗ್ಗೇಶ್ ನಟನೆಯಲ್ಲಿ ತೊಡಗಿಸಿಕೊಂಡ್ರು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದಲ್ಲಿ ತನ್ನದೇಯಾದ ಛಾಪು ಮೂಡಿಸಿದ್ರು. ಇಬ್ಬರೂ ಒಟ್ಟಿಗೆ ಸಿನಿಪಯಣ ಆರಂಭಿಸಿದ್ದರೂ ಇಲ್ಲಿಯವರೆಗೆ ಇಬ್ಬರು ಒಟ್ಟಾಗಿ ಸಿನಿಮಾ ಮಾಡಿಲ್ಲ. ಈಗ ಆ ಕಾಲ ಕೂಡಿ ಬರಲಿದೆ.
ಹೌದು. ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ‘ರಂಗನಾಯಕ’ ಪ್ರೆಸ್ಮೀಟ್ನಲ್ಲಿ ಇಂಥದ್ದೊಂದು ಸುದ್ದಿ ಸಿಕ್ಕಿದೆ. ಸ್ವತಃ ಜಗ್ಗೇಶ್ ಈ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಪ್ರೆಸ್ಮೀಟ್ನಲ್ಲಿದ್ದ ಸುನೀಲ್ ಕುಮಾರ್ ದೇಸಾಯಿಯವರನ್ನು ನೋಡಿ ಮಾತನಾಡಿದ ನವರಸನಾಯಕ ಜಗ್ಗೇಶ್ ನೀವು ಬರೀ ರಮೇಶ್ ಅವರನ್ನೇ ಹಾಕಿಕೊಂಡು ರುಬ್ಬೋದಾಯ್ತು… ನಾವು ಇಲ್ಲೇ 38 ವರ್ಷಗಳಿಂದ ಇದ್ದೀವಿ. ನಮಗೂ ಒಂದು ಚಾನ್ಸ್ ಕೊಡಿ ಅಂತಾ ತಮ್ಮದೇ ಕಾಮಿಡಿ ಸ್ಟೈಲ್ನಲ್ಲಿ ಹೇಳಿದ್ರು.
ಜಗ್ಗೇಶ್ ಮಾತಿಗೆ ಸುನೀಲ್ ಕುಮಾರ್ ದೇಸಾಯಿ, ಸಿನಿಮಾ ಮಾಡೋಣ ಬಿಡಿ ಅನ್ನೋ ಮೂಲಕ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೀಗಾಗಿ ಜಗ್ಗೇಶ್- ಸುನೀಲ್ ಕುಮಾರ್ ಕಾಂಬಿನೇಷನ್ನ ಮೂವಿ ಮೇಲೆ ನಿರೀಕ್ಷೆ, ಕುತೂಹಲ ಜಾಸ್ತಿಯಾಗಿದೆ. ಗಾಂಧಿನಗರದಲ್ಲಿ ಸದ್ಯ ಈ ಸ್ವೀಟ್ ನ್ಯೂಸ್ನದ್ದೇ ಚರ್ಚೆ.
ಸದ್ಯ ಜಗ್ಗೇಶ್ ‘ ರಂಗನಾಯಕ’ ಸಿನಿಮಾ ಬ್ಯುಸಿಯಲ್ಲಿದ್ದಾರೆ. ಮಠ, ಎದ್ದೇಳು ಮಂಜುನಾಥ ಸಿನಿಮಾ ನಂತ್ರ ಜಗ್ಗೇಶ್ ಮತ್ತು ಡೈರೆಕ್ಟರ್ ಗುರುಪ್ರಸಾದ್ ಕಾಂಬಿನೇಷನ್ನಲ್ಲಿ ಬರ್ತಿರೋ ರಂಗನಾಯಕ ಈಗಾಗಲೇ ಸಖತ್ ಸದ್ದು ಮಾಡ್ತಿದೆ. ಟೀಸರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ‘ರಂಗನಾಯಕ’ ಅಬ್ಬರಿಸುತ್ತಿದ್ದಾನೆ. ರಂಗನಾಯಕನ ಬಳಿಕ ಸುನೀಲ್ ಕುಮಾರ್ ದೇಸಾಯಿ ಮತ್ತು ಜಗ್ಗೇಶ್ ಕಾಂಬಿನೇಷನ್ನ ಹೊಸ ಮೂವಿ ಸೆಟ್ಟೇರೋ ಸಾಧ್ಯತೆ ಇದೆ.


