70ನೇ ಗಣರಾಜ್ಯೋತ್ಸವ ಸಂಭ್ರಮ- ದೆಹಲಿಯಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ

0
467

70 ನೇ ಗಣರಾಜ್ಯೋತ್ಸವ ಸಂಭ್ರಮಕ್ಕೆ ದೇಶ ಸನ್ನದ್ಧಗೊಂಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಗಣರಾಜೋತ್ಸವದ ಮೇಲೆ ಉಗ್ರರ ಕರಿನೆರಳು ಬಿದ್ದಿದ್ದು, ಜೈಶ್​ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಂಕಿತ ಇಬ್ಬರು ಉಗ್ರರನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ರಾಜ್​ಪಥ್​ನಲ್ಲಿ, ಐದು ಕಿಲೋಮೀಟರ್​ವರೆಗೂ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪಾಸ್ ಇದ್ದವರು ಮಾತ್ರ ಜನಪಥ್ ರಸ್ತೆಯನ್ನು ಪ್ರವೇಶಿಸಬಹುದಾಗಿದೆ. ಇನ್ನು ಗಣರಾಜ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೂರು ಬಗೆಯ ಭದ್ರತೆ ಒದಗಿಸಲಾಗಿದ್ದು ಎಸ್​ಪಿಜಿ, ಬ್ಲಾಕ್ ಕ್ಯಾಟ್ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ಗಣ್ಯರಿಗೆ ಸ್ಪೆಷಲ್ ಪ್ರೊಟಕ್ಷನ್ ಗ್ರೂಪ್​ನಿಂದ ಭದ್ರತೆ ನೀಡಲಾಗುತ್ತಿದೆ.
ಅಷ್ಟೇ ಅಲ್ಲದೇ ರಾಜ್​ಪಥ್​ನಿಂದ ಕೆಂಪುಕೋಟೆ ತನಕ ನಡೆಯುವ 8 ಕಿಲೋ ಮೀಟರ್​ ಪರೇಡ್​ಗೆ ಚ್ಯುತಿ ಆಗದಂತೆ, ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಭದ್ರತೆಗೆ ಒಟ್ಟು 25 ಸಾವಿರ ಪೊಲೀಸ್​ ಸಿಬ್ಬಂದಿಯನ್ನು ನೇಮಿಸಲಾಗಿದೆ. ಌಂಟಿ ಏರ್ ಕ್ರಾಫ್ಟ್​ ಗನ್ಸ್​, ಶಾರ್ಪ್​ ಶೂಟರ್ಸ್​, ಮೊಬೈಲ್ ಹಿಟ್ ಟೀಂ ಸೇರಿದಂತೆ ಹಲವೆಡೆ ಸಿಸಿ ಕ್ಯಾಮೆರಾ ಹಾಗೂ ಮುಖ ಚಹರೆ ಪತ್ತೆ ಹಚ್ಚುವ ಕ್ಯಾಮರಾಗಳನ್ನೂ ಭದ್ರತೆಗಾಗಿ ನಿಯೋಜಿಸಲಾಗಿದೆ.
ದೆಹಲಿಯ ರಾಜಪಥ್​ನಲ್ಲಿ ನಡೆಯುವ 70ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ನಡೆಯುವ ಸ್ತಬ್ಧ ಚಿತ್ರಗಳ ಸಹಿತ ಪಥಸಂಚಲನದಲ್ಲಿ ಇದೇ ಮೊದಲ ಬಾರಿಗೆ ಕನ್ನಡದ ಹಾಡು ಕೇಳಿಸಲಿದೆ. ಗಾಂಧಿ ನೆನಪಿನ ಹಿನ್ನೆಲೆ ಧ್ವನಿಯಾಗಿ ಹುಯಿಲಗೋಳ ನಾರಾಯಣ ರಾವ್ ರಚನೆಯ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡಿದು ಎಂಬ ಹಾಡು ಕೇಳಲಿದೆ.
ಬೆಳಗಾವಿ ಅಧಿವೇಶನದ ಸ್ತಬ್ಧಚಿತ್ರ
ರಾಜ್​ಪಥ್​ನಲ್ಲಿ ನಡೆಯಲಿರುವ 70 ನೇ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಬೆಳಗಾವಿ ಕಾಂಗ್ರೆಸ್​ ಅಧಿವೇಶನದ ಸ್ತಬ್ಥಚಿತ್ರ ಪ್ರದರ್ಶನಗೊಳ್ಳಲಿದೆ.
1924ರಲ್ಲಿ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದಿದ್ದ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ತಬ್ಧಚಿತ್ರ ಪರೇಡ್​ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದೆ. ಖ್ಯಾತ ಕಲಾವಿದ ಶಶಿಧರ ಅಡಪ ನೇತೃತ್ವದಲ್ಲಿ ಸ್ತಬ್ಥಚಿತ್ರವನ್ನು ರೂಪಿಸಲಾಗಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಈ ಟ್ಯಾಬ್ಲೋವನ್ನು ನಿರ್ಮಿಸಲಾಗಿದೆ. ಇನ್ನೂ ಗಾಂಧೀಜಿ ಅವರ ಪರಿಕಲ್ಪನೆ ಆಧಾರದ ಮೇಲೆ ಸ್ತಬ್ಧಚಿತ್ರಗಳನ್ನು ನಿರೂಪಿಸಬೇಕೆಂದು ಪಥಸಂಚಲನದ ಹೊಣೆ ಹೊತ್ತಿರುವ ರಕ್ಷಣಾ ಇಲಾಖೆ ಈ ಮೊದಲೇ ಸೂಚಿಸಿತ್ತು.

LEAVE A REPLY

Please enter your comment!
Please enter your name here