ಕಲಬುರಗಿ: ಮಹಾಮಾರಿ ಕೊರೋನಾ ಸೋಂಕಿಗೆ ಕಲಬುರಗಿಯಲ್ಲಿ ಇಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿದೆ.
65 ವರ್ಷದ ವೃದ್ಧ ತೀವ್ರ ಉಸಿರಾಟದ ತೊಂದರೆಯಿಂದ ಮಂಗಳವಾರ ನಿಧನ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಬಹುಮನಿ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನ ಚಿಕಿತ್ಸೆ ಪಡೆದಿದ್ದರು. ಬಳಿಕ ಅವರನ್ನು ಇಎಸ್ಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರಿಗೆ ಕೊರೋನಾ ಸೋಂಕು ಇರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಿದ್ದರು. ಆದರೆ ನಿನ್ನೆ ಅವರು ಮೃತ್ಪಪಟ್ಟಿದ್ದು, ಅವರಿಗೆ ಸೋಂಕು ಇತ್ತು ಅನ್ನುವ ವಿಚಾರ ಇಂದು ವರದಿ ಮೂಲಕ ತಿಳಿದುಬಂದಿದೆ.
ಸದ್ಯ ಮೃತ ವ್ಯಕ್ತಿಯು ಯಾರೊಂದಿಗೆಲ್ಲಾ ಸಂಪರ್ಕ ಹೊಂದಿದ್ದರು, ಎಲ್ಲೆಲ್ಲಾ ಪ್ರಯಾಣ ಬೆಳೆಸಿದ್ದರು ಎಂಬುದು ತಿಳಿದುಬಂದಿಲ್ಲ. ಹಾಗಾಗಿ ಬಹುಮನಿ ಆಸ್ಪತ್ರೆಯನ್ನು ಮುಚ್ಚಲಾಗಿದೆ. ಹಾಗೆಯೇ ಆಸ್ಪತ್ರೆಯ ನಾಲ್ಕು ಜನ ನರ್ಸ್ಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಮೃತ ವ್ಯಕ್ತಿಯ ಮನೆ ಸುತ್ತಮುತ್ತ ಕಟ್ಟೆಚ್ಚರ ವಹಿಸಲಾಗಿದೆ.