ಶತಮಾನದ ತೀರ್ಪು ನೀಡಿದ ಸುಪ್ರೀಂ ನ್ಯಾಯಮೂರ್ತಿಗಳು ಇವರೇ…

0
431

ನವದೆಹಲಿ : ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್​ ನೇತೃತ್ವದ ಪಂಚ ಸದಸ್ಯ ಪೀಠ ವಿವಾದಿತ 2.77 ಎಕರೆ ಭೂಮಿಯನ್ನು ರಾಮಲಲ್ಲಾಗೆ ನೀಡಿ ತೀರ್ಪು ಪ್ರಕಟಿಸಿದೆ. ಸುನ್ನಿ ವಕ್ಫ್​ಬೋರ್ಡಿಗೆ ಅಯೋಧ್ಯೆಯಲ್ಲೇ ಪ್ರತ್ಯೇಕ 5 ಎಕರೆ ಜಾಗ ನೀಡುವಂತೆಯೂ ಪೀಠ ತಿಳಿಸಿದೆ. ಇದರೊಂದಿಗೆ ಅಯೋಧ್ಯೆಯ 2.77 ಎಕರೆ ಶತಮಾನದ ಭೂ ವಿವಾದಕ್ಕೆ ತೆರೆ ಬಿದ್ದಿದೆ.

ಅಯೋಧ್ಯೆ ಮಹಾ ತೀರ್ಪು ಪ್ರಕಟ : ವಿವಾದಿತ ಜಾಗ ರಾಮ್​ಲಲ್ಲಾಗೆ- ಇಲ್ಲಿದೆ ತೀರ್ಪಿನ ಮುಖ್ಯಾಂಶಗಳು

ಈ ಮಹತ್ವದ ತೀರ್ಪು ನೀಡಿರೋದು ಸಿಜೆಐ ರಂಜನ್ ಗೊಗೊಯ್, ನ್ಯಾ ಎಸ್​​ ಎ ಬೊಬ್ಡೆ, ನ್ಯಾ ಡಿ ವೈ ಚಂದ್ರಚೂಡ್, ನ್ಯಾ ಅಶೋಕ್ ಭೂಷಣ್, ನ್ಯಾ. ಅಬ್ದುಲ್ ನಜೀರ್ ಅವರನ್ನೊಳಗೊಂಡ ಪೀಠ.
ಇಲ್ಲಿ ಪಂಚ ಪೀಠದ ನ್ಯಾಯಮೂರ್ತಿಗಳ ಪರಿಚಯ
ನ್ಯಾ ರಂಜನ್ ಗೊಗೊಯ್ :

ಇವರು ಸುಪ್ರೀಂಕೋರ್ಟ್​ ನ ಮುಖ್ಯ ನ್ಯಾಯಮೂರ್ತಿಗಳು. ಅಸ್ಸಾಂನ ದಿಬ್ರುಗಢದಲ್ಲಿ 1954 ನವೆಂಬರ್ 18ರಂದು ಜನಿಸಿದರು. 1978ರಲ್ಲಿ ಗುವಾಹತಿ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ ಇವರು, 2001ರಲ್ಲಿ ಗುವಾಹತಿ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ, ಬಳಿಕ ಫೆಬ್ರವರಿ 28, 2001 ಖಾಯಂ ನ್ಯಾಯಮೂರ್ತಿಯಾಗಿ ನೇಮಕವಾದರು. 2010 ಸೆಫ್ಟೆಂಬರ್ 9ರಂದು ಪಂಜಾಬ್‌-ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಗೊಂಡು ನಂತರ ಫೆಬ್ರವರಿ 12ರಂದು 2011ರಂದು ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿ ನೇಮಿಸಲ್ಪಟ್ಟರು.
ಏಪ್ರಿಲ್‌ 2, 2012ರಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ವರ್ಗಗೊಂಡಿದ್ದ ಇವರು, 2018, ಅಕ್ಟೋಬರ್‌ 3ರಿಂದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈಶಾನ್ಯ ರಾಜ್ಯಗಳಿಂದ ನೇಮಕವಾದ ಮೊದಲ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಇವರು ನವೆಂಬರ್ 17ರಂದು ನಿವೃತ್ತಿಯಾಗಲಿದ್ದಾರೆ.

ನ್ಯಾ. ಎಸ್​​.ಎ.ಬೊಬ್ಡೆ :

ಪ್ರಸ್ತುತ ಸುಪ್ರೀಂಕೋರ್ಟ್​ನ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾ. ಎಸ್​. ಎ ಬೊಬ್ಡೆ ರಂಜನ್ ಗೊಗೊಯ್ ನಂತರ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಲಿದ್ದಾರೆ, ಜನಿಸಿದ್ದು 1956 ಏಪ್ರಿಲ್ 24ರಂದು. ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದ ಇವರು, ಮಧ್ಯಪ್ರದೇಶ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಯಾಗಿಯೂ, ಮಹಾರಾಷ್ಟ್ರ ನ್ಯಾಷನಲ್‌ ಲಾ ಯೂನಿವರ್ಸಿಟಿ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ನವೆಂಬರ್‌ 18ರಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಸಲಿದ್ದು, 2021ರ ಏಪ್ರಿಲ್ 23ರಂದು ನಿವೃತ್ತಿ ಹೊಂದಲಿದ್ದಾರೆ.

ನ್ಯಾ. ಡಿ. ವೈ. ಚಂದ್ರಚೂಡ್​​​ :

1959 ನವೆಂಬರ್ 11ರಂದು ಜನಿಸಿದ ಇವರು, ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ, ಬಾಂಬೆ ಹೈಕೋರ್ಟ್​ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿರುವ ಇವರು ಸದ್ಯ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಎನ್​ ವೈ ಚಂದ್ರಚೂಡ್‌ ಸುಪ್ರೀಂಕೋರ್ಟ್‌ ಸಿಜೆಐ ಆಗಿದ್ದರು.

ನ್ಯಾ. ಅಶೋಕ್​​ ಭೂಷಣ್​​ :

ಜುಲೈ 5, 1956 ರಲ್ಲಿ ಉತ್ತರಪ್ರದೇಶದ ಜನೌಪುರ್‌ನಲ್ಲಿ ಜನಿಸಿದ ಅಶೋಕ್ ಭೂಷಣ್ ಅವರು, 1979ರಲ್ಲಿ ಅಲಹಬಾದ್‌ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು, ಏಪ್ರಿಲ್‌ 6, 1979ರಿಂದ ಉತ್ತರಪ್ರದೇಶದಲ್ಲಿ ವಕೀಲ ವೃತ್ತಿ ಆರಂಭಿಸಿದರು. ಏಪ್ರಿಲ್‌ 24ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ, ಬಳಿಕ ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಇವರು, ಮೇ 13, 2016ರಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯಾ. ಅಬ್ದುಲ್​ ನಜೀರ್​​ :

ಜನವರಿ 5, 1958ರಲ್ಲಿ ದಕ್ಷಿಣಕನ್ನಡ ಜಿಲ್ಲೆ, ಬೆಳುವಾಯ್‌ನಲ್ಲಿ ಜನಿಸಿದ ನ್ಯಾ. ಅಬ್ದುಲ್​ ನಜೀರ್​​ ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿಪಡೆದವರು. 1983ರಲ್ಲಿ ಬೆಂಗಳೂರಿನಲ್ಲಿ ಕಾನೂನು ವೃತ್ತಿ ಆರಂಭಿಸಿ, 2003 ಮೇನಲ್ಲಿ ಕರ್ನಾಟಕ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ, 2017ರಲ್ಲಿ ಕರ್ನಾಟಕ ಹೈಕೋರ್ಟ್‌ ಖಾಯಂ ನ್ಯಾಯಮೂರ್ತಿಯಾಗಿ ನೇಮಕವಾದರು.
ಇವರು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗದೇ ನೇರವಾಗಿ ಸುಪ್ರೀಂಕೋರ್ಟ್‌ಗೆ ನೇಮಕವಾದ 3ನೇ ನ್ಯಾಯಮೂರ್ತಿ. ತ್ರಿವಳಿ ತಲಾಕ್‌ ಸೇರಿದಂತೆ ಹಲವು ತೀರ್ಪುಗಳನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here