Monday, January 17, 2022
Powertv Logo
HomePower Specialನಮ್ಮ 'ಷರೀಫ್ ಸಾಹೇಬ್ರು ’

ನಮ್ಮ ‘ಷರೀಫ್ ಸಾಹೇಬ್ರು ’

ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಸಿ.ಕೆ. ಜಾಫರ್ ಷರೀಫ್ ಅವರು ಕಾಲನ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ್ರು, 85 ವರ್ಷದ ಜಾಫರ್ ಷರೀಫ್ ಅವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ರು. ನ.25ರಂದು ನಮ್ಮನ್ನೆಲ್ಲ ಅಗಲಿದ್ರು. ಈ ಹಿರಿಯ ಮುತ್ಸದ್ಧಿ ಜಾಫರ್ ಷರೀಫ್ ಅವರು ಮಾಡಿದ ಸಾಧನೆ, ಗಳಿಸಿದ ಯಶಸ್ಸು ಅನನ್ಯ.

ದಿಗ್ಗಜರ ಸಾಲಿಗೆ ಸೇರಿದ್ದ ಅನುಭವಿ: ಹೇಳಿಕೊಳ್ಳುವಂತಹ ವಿದ್ಯಾರ್ಹತೆ ಇರಲಿಲ್ಲ. ಆದ್ರೂ ಹರಿತ ಬುದ್ಧಿಶಕ್ತಿ ಮತ್ತು ಲೌಕಿಕ ವ್ಯವಹಾರದ ಪ್ರಜ್ಜೆ ಸದಾ ಎಚ್ಚರವಾಗಿತ್ತು. ಜೊತೆಗೆ ವಿಶಿಷ್ಟ ದಿಟ್ಟತನ ಬೆನ್ನಿಗಿತ್ತು.ಇದು ಬೇರುಮಟ್ಟದ ರಾಜಕೀಯ ಕಾರ್ಯಕರ್ತರನೊಬ್ಬನನ್ನು ದೆಹಲಿಯ ಶಕ್ತಿ ರಾಜಕಾರಣದಲ್ಲಿ ಕೂರಿಸಬಲ್ಲದು ಎಂಬುವುದಕ್ಕ ಚಳ್ಳಕೆರೆ ಅಬ್ದುಲ್ ಕರೀಂ ಜಾಫರ್ ಷರೀಫ್ ನಿದರ್ಶನ.

ಸರಿಸುಮಾರು 85 ವರ್ಷದ ಸಿ.ಕೆ. ಜಾಫರ್ ಷರೀಫ್ ಅವರು ನಾಡಿನ ಹಿರಿಯ ರಾಜಕಾರಣಿ. ಸಂಸದರಾಗಿ, ರೈಲ್ವೆ ಸಚಿವರಾಗಿ ಕಾರ್ಯ ನಿರ್ವಹಿಲಿದ್ದರು. ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕರೂ ಹೌದು. ರಾಜಕಾರಣದಲ್ಲಿ ಬಹುಕಾಲ ಇದ್ದ ಅವರು ರಾಜ್ಯ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸ ಮಾಡಿದ್ದಾರೆ.

ಸಂಸದರಾಗಿ, ರೈಲ್ವೆ ಸಚಿವರಾಗಿ ರಾಜ್ಯದ ಜನರಿಗೆ ಚಿರಪರಿಚಿತರಾಗಿದ್ದ ಸಿ.ಕೆ. ಜಾಫರ್ ಷರೀಫ್ ನಾಡು ಕಂಡು ಹಿರಿಯ ನಾಯಕ.  ಇಂದಿರಾ ಗಾಂಧಿಯವರ ಆಪ್ತರೂ ಆಗಿದ್ದ ಅವರು ರಾಜೀವ್ ಗಾಂಧಿಯವರೊಂದಿಗೂ ಕೂಡ ಅನ್ಯೋನ್ಯ ಸಂಬಂಧ ಇಟ್ಟುಕೊಂಡಿದ್ದರು. ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ರೈಲ್ವೆ  ಸಚಿವರಾಗಿದ್ದರು.

ಅಲ್ಪಸಂಖ್ಯಾತರಿಗಷ್ಟೇ ಅಲ್ಲ ಎಲ್ಲ ವರ್ಗದವರ ಹಿತೈಷಿ: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ಅವರಿಗೆ ಅತ್ಯಂತ ಪ್ರಿಯವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ಸತತವಾಗಿ 5 ಬಾರಿ ಗೆದ್ದು ಲೋಕಸಭೆ ಪ್ರವೇಶಿದ್ದರು. ಒಮ್ಮೆ ಅಂದ್ರೆ 1996ರಲ್ಲಿ ಜನತಾದಳದಿಂದ ನಾರಾಯಣಸ್ವಾಮಿ ಈ ಕ್ಷೇತ್ರದಿಂದ ಒಮ್ಮೆ ಆಯ್ಕೆಯಾದ್ರು.ನಂತ್ರ 2 ಬಾರಿ ಇದೇ ಕ್ಷೇತ್ರದಿಂದ ಜಾಫರ್ ಷರೀಫ್ ಆರಿಸಿ ಬಂದಿದ್ದರು. ಜಾಫರ್ ಷರೀಫ್ ಅವರು, ಕೇವಲ ಅಲ್ಪಸಂಖ್ಯಾತರಿಗಷ್ಟೇ ಮುಖಂಡರಾಗಿರದೆ, ಎಲ್ಲ ವರ್ಗದವರ ಹಿತ ಚಿಂತಕರಾಗಿದ್ದರು. ದೇಶದ ರೈಲ್ವೆ ಮಾರ್ಗ ಅಭಿವೃದ್ಧಿ, ಗೇಜ್ ಪರಿವರ್ತನೆ ಮತ್ತು ಶಿಕ್ಷಣದ ಸಂಸ್ಥೆಗಳ ಸುಧಾರಣೆಗೆ ಅಪಾರ ಕೊಡುಗೆ ನೀಡಿದ್ದರು.

ಕರ್ನಾಟಕದಿಂದ ರೈಲ್ವೆ ಸಚಿವರಾದ ಹಲವು ದಿಗ್ಗಜರ ಸಾಲಿನಲ್ಲಿ ಎದ್ದು ಕಾಣುವ ಹೆಸರು ಜಾಫರ್ ಷರೀಫ್ ಅವರದ್ದು. ಭಾರತದ ರೈಲ್ವೆ ಭೂಪಟದ ಮೂಲೆಯಲ್ಲೆಲ್ಲೋ ಅದುಮಿ ಹೋಗಿದ್ದ  ರಾಜ್ಯಕ್ಕೆ ನ್ಯಾಯ ಸಲ್ಲಿಸಿದ ಮೊದಲಿಗರು. ಕೆಂಗಲ್ ಹನುಮಂತಯ್ಯ  ಅವರ  ಮೀಟರ್ ಗೇಜ್ ಕನಸನ್ನು ನನಸಾಗಿಸಿದರು.

ಘಟಾನುಘಟಿಗಳಿಗೆ ಮಗ್ಗಲು ಮುಳ್ಳು: ಒಂದು ಕಾಲದಲ್ಲಿ ಭಾರತೀಯ ರೈಲ್ವೆಯಲ್ಲಿ ದೊಡ್ಡ ಕಂಟ್ರಾಕ್ಟರುಗಳ ರಚಿಸಿಕೊಂಡಿದ್ದ ಹಿಸಾಸಕ್ತಿಯ ಕೂಟವೇ ಮೇಲಾಗಿತ್ತು. ಆದರೆ, ಸಿ.ಕೆ. ಜಾಫರ್ ಷರೀಫ್ ಅದನ್ನು ಹೊಡೆದು ಸಣ್ಣ ಗುತ್ತಿಗೆದಾರರರಿಗೂ ಅವಕಾಶ ನೀಡಿದರು. ಈ ಬಗ್ಗೆ ಅಪಖ್ಯಾತಿಯೂ ಬಂದಿತ್ತು. ಆದರೂ ಜಾಫರ್ ಷರೀಫ್ ಲೆಕ್ಕಿಸಲಿಲ್ಲ.

ಕಾಂಗ್ರೆಸ್ ಹೈಕಮಾಂಡ್  ನಿಕಟವರ್ತಿ: ಅದರಲ್ಲೂ ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ವೀರೇಂದ್ರ ಪಾಟೀಲ್ ಅವರ ಪದಚ್ಯುತಿಯಲ್ಲಿ ಜಾಫರ್ ಷರೀಫ್ ಪಾತ್ರ ದೊಡ್ಡದಿತ್ತು ಅಂತಾ ಹೇಳಲಾಗುತ್ತಿತ್ತು. ಸುದೀರ್ಘ ಸಂಸದೀಯ ಬದುಕಿನಲ್ಲಿ ಇಂದಿರಾಗಾಂಧಿ ತರುವಾಯ ಹಲವು ಕಾಂಗ್ರೆಸ್ ಅಧ್ಯಕ್ಷರ ನಿಕಟ ಸಂಪರ್ಕದಲ್ಲಿ ಕೆಲಸ ಮಾಡಿದ ಅನುಭವಿ.

1980ರ ಸೆಪ್ಪಂಬರ್ ನಲ್ಲಿ ಅತ್ಯುತ್ಸಾಹಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ  ಪತ್ರಿಕಾ ಕಚೇರಿಗಳಿಗೆ ಜಡಿದ ಬೀಗಗಳನ್ನು ತೆಗೆಸುವಲ್ಲಿ ಷರೀಫ್ ಅವರ ಪಾತ್ರವಿತ್ತು . ವಿಶೇಷವಾಗಿ ಕರ್ನಾಟಕದ ಪತ್ರಕರ್ತರು, ಅದರಲ್ಲೂ ಬೆಂಗಳೂರು ಮೀಡಿಯಾದವರು ಎಂದರೆ  ಅವರಿಗೆ ಎಲ್ಲಿಲ್ಲದ ಗೌರವ.

ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ: ಜಾಫರ್ ಷರೀಫ್… ಬಿಜೆಪಿ, ಜನತಾ ಪರಿವಾರ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಡನೆ ಆಪ್ತ ಸಂಬಂಧ ಹೊಂದಿದ್ದರೂ ಕಾಂಗ್ರೆಸ್ ಗೆ  ಅವರ ನಿಷ್ಠೆ ಮೀಸಲಾಗಿತ್ತು. ಆದರೆ, ಪಕ್ಷ ತಮ್ಮನ್ನು ನಿರ್ಲಕ್ಷಿಸುತ್ತಿದೆ ಎನಿಸಿದಾಗಲೆಲ್ಲಾ ಮುಂಚೂಣಿ ನಾಯಕರಿಗೆ ಇರಿಸುಮುರಿಸಾಗುವ ಹೇಳಿಕೆಗಳನ್ನು ನೀಡುವ ಮೂಲಕ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು.

 ಇದು ಇಂದು ನಿನ್ನೆಯದಲ್ಲ, ಇಂದಿರಾ ಗಾಂಧಿಯವರ ಕಾಲದಿಂದಲೂ ಬೆಳೆದಿದೆ. ಈ ನಡೆ ಇಂದಿಗೂ ‘ಜಾಫರ್ ಷರೀಫ್ ಸಿಂಡ್ರೋಮ್ ಎಂದು ರಾಜಕೀಯ ಪರಿಭಾಷೆಯಾಗಿಯೇ ಬೆಳೆದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅವಧಿಯಲ್ಲಿ ಇಂಥ ಪ್ರಸಂಗಗಳು ಹಲವು ಬಾರಿ ನಡೆದಿದ್ದವು. ಎಸ್. ಎಂ. ಕೃಷ್ಣ ಸರ್ಕಾರವನ್ನ  ಅವರು ಕಟುವಾಗಿ ಟೀಕಿಸುತ್ತಿದ್ದರು. ಹಲವು ಭಾರಿ ಅವರ ಹೆಸರು ಸಿಎಂ ಸ್ಥಾನಕ್ಕೂ ಕೇಳಿಬಂದಿತ್ತು. ಜೆಡಿಎಸ್ ಅಥವಾ ಬಿಜೆಪಿ ಸೇರಬಹುದು ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಅವೆಲ್ಲವೂ ಹುಸಿಯಾದವು.

ಎಸ್.ನಿಜಲಿಂಗಪ್ಪನವರ ಕಾರಿನ ಸಾರಥಿ: ಇನ್ನು, ಜಾಫರ್ ಷರೀಫ್ ಅವರ ರಾಜಕೀಯ ಆರಂಭಿಕ ಕಾಲದ ಬಗ್ಗೆ  ಹೇಳಬೇಕೆಂದರೆ, ಸಿ.ಕೆ. ಜಾಫರ್ ಷರೀಫ್, ಮೂಲತಃ ಚಿತ್ರದುರ್ಗದವರವರು. ಆ ಭಾಗದ ಪವರ್ ಫುಲ್ ಲೀಡರ್, ಲಿಂಗಾಯತರ ಪ್ರಭಾವಿ ನಾಯಕರಾಗಿದ್ದ ಮತ್ತೆ ದೇಶದ ಕಾಂಗ್ರೆಸ್ಸಿನ ಅಗ್ರಗಣ್ಯ ನಾಯಕರೊಬ್ಬನಿಸಿದ  ಎಸ್. ನಿಜಲಿಂಗಪ್ಪನವರ ಕಾರು ಡ್ರೈವರ್ ಆಗಿದ್ದರು. ನಂತ್ರದ ದಿನಗಳಲ್ಲಿ ಆಫೀಸ್ ಅಸಿಸ್ಟೆಂಟ್ ಕೂಡ ಆಗಿದ್ದರು.  ಹಾಗಾಗಿಯೇ ಜಾಫರ್ ಷರೀಫ್ ಅವರನ್ನು ನಿಜಲಿಂಗಪ್ಪನವರೇ ಕಾಂಗ್ರೆಸ್ಸಿಗೆ ಕರೆತಂದರು.

ಅದು 1960 ದಶಕದ ಕಾಲ. ಆರಂಭದಲ್ಲಿ ಜಾಫರ್ ಷರೀಫ್, ಎಸ್. ನಿಜಲಿಂಗಪ್ಪನವರ ಬಂಟರಾಗಿದ್ದರು. ಆದರೆ, ಕಾಂಗ್ರೆಸ್  ಇಬ್ಭಾಗವಾದಾಗ 1969-70ರ ದಿನಗಳಲ್ಲಿ ಇಂದಿರಾಗಾಂಧಿಯವರಿಗೆ ಕರ್ನಾಟಕದ ರಾಜಕಾರಣದ ಪಿನ್ ಟು ಪಿನ್ ಮಾಹಿತಿಯನ್ನ ನೀಡುತ್ತಾ ಇದ್ದರು.ಹೀಗಾಗಿಯೇ  ಅವರು 1971ರಲ್ಲಿ ನಡೆದ ಕನಕಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಹುರಿಯಾಳುಯಾಗಿ ಕಣಕ್ಕಿಳಿದಿದು ಗೆದ್ದು ಸಂಸತ್ ಸದಸ್ಯರಾಗಿದ್ದು ಇತಿಹಾಸ.

ಮೊದಲ ಬಾರಿಗೆ ಸಂಸತ್ ಪ್ರವೇಶ: ಜಾಫರ್ ಷರೀಫ್ ಮೂಲತಃ ಚಿತ್ರದುರ್ಗದವರು, ಆದರೆ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದು  ಕನಕಪುರ ಲೋಕಸಭಾ ಕ್ಷೇತ್ರದಿಂದ. ಇದಕ್ಕೆ ದೇಶದ ಅತಿದೊಡ್ಡ ಲೋಕಸಭಾ ಕ್ಷೇತ್ರವೆಂದೂ ಹೆಗ್ಗಳಿಕೆಯೂ ಇತ್ತು. ಮತ್ತೆ ಆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ತುಂಬಾ ಕಡಿಮೆ. ಇಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರ ಪ್ರಾಬಲ್ಯವೇ ಹೆಚ್ಚಿತ್ತು. ಅಂತಹ ಕ್ಷೇತ್ರದಲ್ಲಿ ಜಾಫರ್ ಷರೀಫ್ ಅವರು ಚುನಾವಣಾ ಅಖಾಡಕ್ಕಿಳಿದರು.

 ಅದರಲ್ಲೂ ಮಾಜಿ ಸಿಎಂ, ಲಿಂಗಾಯತರ ಪ್ರಭಾವಿ ನಾಯಕರಾಗಿದ್ದ ಎಸ್. ನಿಜಲಿಂಗಪ್ಪನವರ ಅಳಿಯ ಎಂ.ವಿ. ರಾಜಶೇಖರನ್ ಅವರು ಕಾಂಗ್ರೆಸ್ ಎಸ್ ನಿಂದ ಸ್ಪರ್ಧಿಸಿ, ಜಾಫರ್ ಷರೀಫ್ ಅವರ ಎದುರಾಳಿಯಾಗಿದ್ದರು. ಅದರೂ, ಇಂದಿರಾ ಗಾಳಿಯಲ್ಲಿ ಜಾಫರ್ ಷರೀಫ್ ಗೆದ್ದು ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಿದರು.

ಇಂದಿರಾ, ರಾಜೀವ್, ಪಿವಿಎನ್ ಮಂತ್ರಿ ಮಂಡಲದಲ್ಲಿ ಸಚಿವಗಿರಿ: 1979ರಲ್ಲಿ ದೇವರಾಜು ಅರಸು ಅವರು ಇಂದಿರಾ ಅವರನ್ನು ತೊರೆದು ಬೇರೆ ದಾರಿ ಹಿಡಿದಾಗಲೂ ಜಾಫರ್ ಷರೀಫ್ ಇಂದಿರಾ ಗಾಂಧಿಯವರಿಗೆ ನಿಷ್ಠರಾಗಿ ಉಳಿದರು.1980ರಲ್ಲಿ ಇಂದಿರಾ ಗಾಂಧಿಯವರು ಅಧಿಕಾರಕ್ಕೆ ಮರಳಿದ ನಂತರ ರೈಲ್ವೆ ರಾಜ್ಯ ಮಂತ್ರಿಯಾದರು. ರಾಜೀವ್ ಗಾಂಧಿ ಮಂತ್ರಿ ಮಂಡಲದಲ್ಲಿ ಕಲ್ಲಿದ್ದಲು ಖಾತೆ ನಿರ್ವಹಿಸಿದರು.

ಜಾಫರ್ ಷರೀಫ್ ಅವರು,1980-84ರಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿ, ರಾಜ್ಯದಿಂದ ಮೊದಲ ರೈಲ್ವೆ ಸಚಿವರೆಂಬ ಖ್ಯಾತಿಯನ್ನು ಪಡೆದರು. 1984ರಲ್ಲಿ ಲೋಕಸಭೆಗೆ 4ನೇ ಬಾರಿ ಆಯ್ಕೆ, ನೀರಾವರಿ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ರು. 1988-89ರಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಅವರಿಗೆ ಇದೆ. 1989ರಲ್ಲಿ ಐದನೇ ಬಾರಿಗೆ  ಲೋಕಸಭೆಗೆ  ಅವರು ಆಯ್ಕೆಯಾದರು.

ಸಂಸದೀಯ ಮಂಡಳಿಯಲ್ಲಿ ಕಾರುಬಾರು: ಹಿರಿಯ ಮುತ್ಸದ್ಧಿ ಜಾಫರ್  ಷರೀಫ್ ಅವರು, ಅನೇಕ ಸಂಸದೀಯ ಮಂಡಳಿಗಳ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಸಾರ್ವಜನಿಕ ಉದ್ಯಮಗಳ ಸಮಿತಿ, ಸರ್ಕಾರದ ಖಾತ್ರಿ ಸಮಿತಿ, ವಾಣಿಜ್ಯ ಸಲಹಾ ಸಮಿತಿ, ಆರೋಗ್ಯ-ಇಂಧನ-ಅಣುಶಕ್ತಿ ಮತ್ತು ಮಾಧ್ಯಮ ವ್ಯವಹಾರಗಳ ಸಲಹಾ ಸಮಿತಿ, ಮುಖ್ಯವಾಗಿ ಪತ್ರಿಕಾ ವ್ಯವಹಾರ ಮತ್ತು ಸ್ವತಂತ್ರ ಸೈನಿಕ ಸಮ್ಮಾನ್ ಪಿಂಚಣಿ ಯೋಜನೆ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಎಲ್ಲಾ ಜವಾಬ್ದಾರಿಗಳಿಂತಲೂ ರೈಲ್ವೆ ಖಾತೆಯಲ್ಲಿ ಅಮೂಲಾಗ್ರ ಬದಲಾವಣೆ ತಂದರು. ವಿಶೇಷವಾಗಿ ಕರ್ನಾಟಕದ ಪಾಲಿಗೆ ಅನೇಕ ಕೊಡುಗೆಗಳನ್ನು ನೀಡಿದ್ದು, ರಾಜಧಾನಿ ದೆಹಲಿಯನ್ನು ಬಿಟ್ಟು ದೇಶದ ಬೇರೆಲ್ಲೂ ನಡೆಯದಿದ್ದ ರೈಲ್ವೆ ಮಂಡಳಿ ಸಭೆಯನ್ನು ಪ್ರಥಮ ಬಾರಿಗೆ ಕರ್ನಾಟಕದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ದೆಹಲಿ ಮುಪ್ತಿಯಲ್ಲಿದ್ದ ರೈಲ್ವೆ ಇಲಾಖೆ ಹುಬ್ಬಳ್ಳಿಗೆ: ಮುಖ್ಯವಾಗಿ ಹುಬ್ಬಳ್ಳಿಯಲ್ಲಿ ನಡೆದ ಮೊದಲ ರೈಲ್ವೆ ಮಂಡಳಿ ಸಭೆಯಲ್ಲಿ ಜಾಫರ್ ಷರೀಫ್ , ಕರ್ನಾಟಕಕ್ಕೆ ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಉದಾರವಾದ ರೈಲ್ವೆ ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಿದರು. ಆ ಸಭೆಯಲ್ಲಿ ನಿರ್ಧರಿತವಾದ ಯೋಜನೆಗಳೇ ಇಂದಿಗೂ ಜಾರಿಯಲ್ಲಿರುವುದು . ಇದು ಜಾಫರ್ ಷರೀಫ್ ಅವರ ಕಾಳಜಿಯನ್ನು ಅಭಿವೃಕ್ತಿಸುತ್ತದೆ.

ಮೀರಜ್- ಬೆಂಗಳೂರು ನಡುವೆ ಸಂಚರಿಸುತ್ತಿದ್ದ  ‘ ಕಿತ್ತೂರು ಎಕ್ಸ್ ಪ್ರೆಸ್ ‘ ರೈಲಿಗೆ ‘ ಕಿತ್ತೂರು ರಾಣಿ ಚೆನ್ನಮ್ಮ’ ಎಂದು ಮರು ನಾಮಕರಣ ಮಾಡಿದ್ದು ಅವರ ಅವಧಿಯಲ್ಲಿಯೇ. ಜೊತೆಗೆ ಮೀರಜ್- ಬೆಂಗಳೂರು ಮೀಟರ್ ಗೇಜ್ ಅನ್ನು ಬ್ರಾಡ್ ಗೇಜ್ ಪರಿವರ್ತಿಸಲು ಅದ್ಯತೆ ನೀಡಿದ್ದು ಜಾಫರ್ ಷರೀಷ್ ಅವರು.

ಹುಬ್ಬಳ್ಳಿ-ಚಿತ್ರದುರ್ಗ-ತುಮಕೂರು ರೈಲ್ವೆ  ಮಾರ್ಗ: ಇನ್ನು ಹುಬ್ಬಳ್ಳಿ-ಧಾರವಾಡದಿಂದ ಬೆಂಗಳೂರಿಗೆ ಬರಲು ರೈಲ್ವೆ ಮಾರ್ಗವೇ ಇರಲಿಲ್ಲ. ಗುಂಟೂರು ಮಾರ್ಗವಾಗಿ ಸುತ್ತು ಬಳಸಿ ಹೋಗಬೇಕಿತ್ತು. ಜಾಫರ್ ಷರೀಫ್ ಅವರು ರೈಲ್ವೆ  ಸಚಿವರಾಗಿದ್ದಾಗ ಚಿತ್ರದುರ್ಗ- ತುಮಕೂರು- ಮಾರ್ಗವಾಗಿ ಬೆಂಗಳೂರಿಗೆ ನೇರ ರೈಲು ಮಾರ್ಗ ಆರಂಭವಾಯಿತು. ಇದರಿಂದ ಈ ಭಾಗದ ಜನರು ರಾಜಧಾನಿ ಬೆಂಗಳೂರಿಗೆ ಬರಲು ಸಾಧ್ಯವಾಯಿತು.

ಕರ್ನಾಟಕ, ಕನ್ನಡಿಗರ ಬಗ್ಗೆ  ವಿಶೇಷ ಒಲವು: ಜಾಫರ್ ಷರೀಫ್ ಅವರು ಕೇಂದ್ರ ಮಂತ್ರಿಯಾಗಿದ್ದಾಗ  ದೆಹಲಿಯ ಅವರ ಅಕ್ಬರ್ ರಸ್ತೆಯ 17ನೇ ನಂಬರಿನ ಅವರ ಸರ್ಕಾರಿ ಬಂಗಲೆಯ ಬಾಗಿಲುಗಳು ಕನ್ನಡಿಗರಿಗೆ ಯಾವಾಗಲೂ ತೆರೆದಿದ್ದವು. ಇನ್ನು ವಿಮಾನಯಾನ ಗಗನ ಕುಸುಮ ಆಗಿದ್ದ  ಆ ದಿನಗಳಲ್ಲಿ  ಕನ್ನಡಿಗರಿಗೆ ರೈಲ್ವೆ ಪಾಸುಗಳು, ಮೀಸಲಿರಿಸಿದ ಟಿಕೆಟ್ ಗಳು ಧಾರಾಳವಾಗಿ ದೊರೆಯುತ್ತಿದ್ದವು.

ಇಷ್ಟೆಲ್ಲಾ ಇದ್ದರೂ  2000 ಇಸವಿಯ ನಂತರ ಜಾಫರ್ ಷರೀಫ್ ಅವರ ರಾಜಕೀಯ ಬದುಕಿನ ಹಾದಿ ಹಿಮ್ಮುಖವಾಯಿತು ಎನ್ನಬಹುದು. 2004ರಲ್ಲಿ  ಷರೀಫ್ ಅವರು ನಿವೃತ್ತ ಪೊಲೀಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ವಿರುದ್ಧ ಸೋಲನುಭವಿಸಿದ ನಂತರ ಅವರು ತೆರೆಮರೆಗೆ ಸರಿದಿದ್ದರು. ನಂತರ ರಾಜ್ಯ ಕಾಂಗ್ರೆಸ್ ಸಮಿತಿ ತಮ್ಮನ್ನು ಕಡೆಗಣಿಸುತ್ತಿದೆ ಎಂಬ ಅಸಮಾಧಾನ ಅವರಲ್ಲಿ ನೆಲೆ ನಿಂತಿತ್ತು.

ಒಟ್ಟಿನಲ್ಲಿ ಏನೇ ಹೇಳಿ, ಜಾಫರ್ ಷರೀಫ್ ಅವರಿಗೆ ದೇಶದ ರಾಜಕಾರಣ ತಮ್ಮನ್ನು  ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೆಂಬ ಎರಕದಲ್ಲಿ ಅಚ್ಚು ಮಾಡಲಿಲ್ಲ. ಬದಲಾಗಿ ಮುಖ್ಯವಾಹಿನಿಯ ರಾಜಕಾರಣಿಯಂತೆ ನಡೆಸಿಕೊಂಡಿತು. ರಾಷ್ಟ್ರ ಮತ್ತು ರಾಜ್ಯ ಕಾರಣದಲ್ಲಿ ಹೊಸ ಮುಸ್ಲಿಂ ಮುಖಂಡರು ಹೊರ ಹೊಮ್ಮುತ್ತಿದ್ದಂತೆಯೇ ಅವರು ಹಿನ್ನೆಲೆಗೆ ಸರಿಯಬೇಕಾಗಿ ಬಂದಿತ್ತು. ಇದು ವಿಪರ್ಯಾಸವೇ ಸರಿ.

-ಎನ್​ ಜಿ ರಮೇಶ್​, ಸ್ಪೆಷಲ್​ ಡೆಸ್ಕ್.​ ಪವರ್​ ಟಿವಿ

 

 

 

 

 

 

 

 

 

 

 

 

 

LEAVE A REPLY

Please enter your comment!
Please enter your name here

- Advertisment -

Most Popular

Recent Comments