ನವದೆಹಲಿ, ಏಪ್ರಿಲ್ 10, 2026: ಇದೇ ಎಪ್ರಿಲ್ 12 ರಂದು ರಾಷ್ಟ್ರದ ರಾಜಧಾನಿಯಲ್ಲಿ ಆಲದ ಮರವಾಗಿ ಬೆಳೆದು ನಿಂತಿರುವ ದೆಹಲಿ ಕರ್ನಾಟಕ ಸಂಘದ ಚುನಾವಣೆ ನಡೆಯಲಿದೆ. ಸುಮಾರು ಹತ್ತು ಸಾವಿರ ಕನ್ನಡಿಗರಿಗೆ ನಾನಾ ರೀತಿಯಲ್ಲಿ ಆಶ್ರಯವಾಗಿರುವ ದೆಹಲಿಯಲ್ಲಿ, ಅಂದಾಜು ನಾಲ್ಕು ಸಾವಿರಕ್ಕೂ ಹೆಚ್ಚು ಜನ ದೆಹಲಿ ಕರ್ನಾಟಕ ಸಂಘದಲ್ಲಿ ಸದಸ್ಯತ್ವ ಪಡೆದಿದ್ದಾರೆ. ಇದರಲ್ಲಿ ಈ ಸಲದ ಚುನಾವಣೆಯಲ್ಲಿ ಎರಡು ಸಾವಿರದಷ್ಟು ಮತದಾರರು ಮತದಾನ ಮಾಡಿದರೆ ಹೆಚ್ಚು ಎನ್ನುವ ಲೆಕ್ಕಚಾರ ಹಾಕಲಾಗುತ್ತಿದೆ. ಜಿದ್ದಾ ಜಿದ್ದಿಯಿಂದ ಕೂಡಿರುವ ಈ ಸಲದ ಸಂಘದ ಚುನಾವಣೆಯಲ್ಲಿ ಎರಡು ತಂಡಗಳು ಸ್ಪರ್ಧೆ ಮಾಡಿವೆ. ಹಾಲಿ ಅಧ್ಯಕ್ಷ ಸಿ.ಎಂ ನಾಗರಾಜ್ ಮತ್ತು ಮಾಜಿ ಕಾರ್ಯದರ್ಶಿ ಹಾಗೂ ಕಳೆದ ಬಾರಿ ಅಧ್ಯಕ್ಷ ಸ್ಥಾನದಿಂದ ಅಲ್ಪ ಮತಗಳ ಅಂತರದಿಂದ ವಂಚಿತರಾಗಿದ್ದ ರೇಣುಕುಮಾರ್ ನೇತೃತ್ವದ ತಂಡ ಕಣದಲ್ಲಿದೆ.
ಎರಡು ತಂಡಗಳಿಂದ ಚುನಾವಣೆ ಭರವಸೆಗಳ ಭರಾಟೆ
ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ದೆಹಲಿ ಕರ್ನಾಟಕ ಸಂಘದ ಚುನಾವಣೆ, ವಿಧಾನಸಭೆ, ಲೋಕಸಭೆ, ರಾಜ್ಯಸಭೆ ವಿಧಾನ ಪರಿಷತ್ ಚುನಾವಣೆ ಮತ್ತು ಬೆಂಗಳೂರಿನ ಕಾರ್ಪೋರೇಷನ್ ಚುನಾವಣೆಯನ್ನು ಮೀರಿಸುವಂತಿದೆ. ರಾಜಕೀಯ ಪಕ್ಷಗಳು ಬಿಡುಗಡೆ ಮಾಡುವ ಪ್ರಣಾಳಿಕೆ ಮಾದರಿಯಲ್ಲಿ ಎರಡು ತಂಡಗಳು ತಮ್ಮ ಭರವಸೆಗಳನ್ನು ದಿಲ್ಲಿ ಕನ್ನಡಿಗರ ಮುಂದೆ ಇಟ್ಟಿವೆ. ಆದರೆ ಹಾಸ್ಯಾಸ್ಪದವಾಗಿ ಇವರ ಭರವಸೆಗಳನ್ನು ಸಾಮಾಜಿಕವಾಗಿ ಚರ್ಚಗೆ ಬಳಸಿಕೊಳ್ಳಲಾಗುತ್ತಿದೆ. ದೂರದ ದೆಹಲಿಗೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಬಂದ ಕನ್ನಡಿಗರಿಗೆ ಮತ ಪಡೆಯಲು ನಾನಾ ಬಗೆಯ ಆಮಿಷ ಒಡ್ಡಲಾಗುತ್ತಿದೆ.
ಸಂಘದ ಆಜೀವ ಸದಸ್ಯರಿಗೆ 5 ರಿಂದ 10 ಲಕ್ಷಗಳ ವಿಮೆ, ಆರ್ಥಿಕವಾಗಿ ಮಹಿಳೆಯರಿಗೆ ಸ್ತ್ರೀ ಶಕ್ತಿ ಯೋಜನೆ, ಕರ್ನಾಟಕದಲ್ಲಿರುವ ಮಾದರಿ, ಸ್ಥಳೀಯ ಕನ್ನಡ ಪರ ಸಂಘಟನೆಗಳಿಗೆ ಆರ್ಥಿಕ ಸಹಯೋಗ, ಸಂಘದ ಸದಸ್ಯರ ಮಕ್ಕಳಿಗೆ ಉದ್ಯೋಗ ಮೇಳ ಆಯೋಜನೆ, ವರ್ಷ ಪೂರ್ತಿ ಉತ್ಸವಗಳು, ಕ್ರೀಡೋತ್ಸವ, ಗೀತೋತ್ಸವ, ನಾಟಕೋತ್ಸವ, ಸಾಹಿತ್ಯೋತ್ಸವ, ಆರೋಗ್ಯೋತ್ಸವ, ಆಹಾರೋತ್ಸವ, ನೃತ್ಯೋತ್ಸವ, ಕ್ರಿಕೆಟೋತ್ಸವ, ಇಂತಹ ನಾನಾ ಉತ್ಸವಗಳ ಸರಮಾಲೆ ಮಾಡಲು ಹಳ್ಳಿಯಿಂದ ದಿಲ್ಲಿಗೆ ನಾವುಗಳು ಬರಬೇಕಾ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೂ, ಜಾಣ ಕುರುಡು ರೀತಿ ಪ್ರಜ್ಞಾವಂತ ಕನ್ನಡಿಗರನ್ನು ದಾರಿ ತಪ್ಪಿಸಲು ಕರ್ನಾಟಕ ಸಂಘವನ್ನು ತಂಡಗಳು ಬಳಸಿಕೊಳ್ಳುತ್ತಿವೆ.
ಕನ್ನಡ ಸೇವೆಯ ಟೆಂಡರ್ ತೆಗದುಕೊಂಡಿದ್ದಾರಾ, ಮತದಾರರ ಪ್ರಶ್ನೆ
ಕನ್ನಡದ ಸೇವೆ ಮಾಡಲು ನಮಗೆ ಮತ ನೀಡಿ, ಕರ್ನಾಟಕ ಸಂಘದ ಅಭಿವೃದ್ಧಿಗಾಗಿ ಮತ ನೀಡಿ ಎಂದು ಅಭ್ಯರ್ಥಿಗಳು ಪ್ರಚಾರ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಕನ್ನಡದ ಕಂಪು, ಭಾಷೆ ಕನ್ನಡ ಸಂಸ್ಕೃತಿ ಬೆಳೆಸಬೇಕು ನಿಜ. ಆದರೆ, ಅದೇ ಉದ್ಯೋಗ, ವ್ಯಾಪಾರ ಆಗಬಾರದು ಅಲ್ವಾ. ಸ್ಪರ್ಧೆ ಮಾಡಿರುವ ಕೆಲವರು ಕನ್ನಡ ಬೆಳೆಸುವ ಟೆಂಡರ್ ತೆಗೆದುಕೊಂಡಿರರುವ ಹಾಗೆ ವ್ಯಾಪಾರಿಕರಣ ಮಾಡುತ್ತಿದ್ದಾರೆ ಎಂದು ಮತದಾರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮತದಾರರ ಆಕ್ರೋಶಕ್ಕೆ ತಕ್ಕ ಹಾಗೆ, ಕಳೆದ ನಾಲ್ಕು ವರ್ಷಗಳಿಂದ ಇದುವರೆಗೆ ನಡೆದ ನಾನಾ ಉತ್ಸವಗಳಲ್ಲಿ ಲಕ್ಷ ಲಕ್ಷ, ಕೋಟಿಗಟ್ಟಲೇ ಅನುದಾನ ಸರ್ಕಾರ ಮತ್ತು ಖಾಸಗಿ ವಲಯಗಳಲ್ಲಿ ಪಡೆಯಲಾಗಿದೆ. ಇದರ ಮಾಹಿತಿಗಳನ್ನು ಸಂಬಂಧಪಟ್ಟವರು ಇದುವರೆಗೆ ಹಂಚಿಕೊಳ್ಳದೇ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಸಂಘದ ಕೆಲವು ಆರೋಪಿಸಿದ್ದಾರೆ. ಸಂಘದ ಅಮೃತ ಮಹೋತ್ಸವದ ಸಮಯದಲ್ಲಿ ಜಿಲ್ಲಾ ವಾರು ಕಾರ್ಯಕ್ರಮ ಮಾಡಿ ಸಂಘದ ಹೆಸರಿನಲ್ಲಿ ತಮ್ಮ ಜೇಬು ತುಂಬಿಸಿಕೊಂಡವರು ಹಲವರು. ಅದರಲ್ಲಿ ರುಚಿ ಕಂಡ ಬಳಿಕ ಹುಟ್ಟಿಕೊಂಡಿದ್ದು ಉತ್ಸವಗಳ ಸರಮಾಲೆ, ವರ್ಷದಲ್ಲಿ ಯುಗಾದಿ ಮಿಲನ, ದೀಪಾವಳಿ ಉತ್ಸವ, ಸಂಕ್ರಾಂತಿ ಮಿಲನ, ಕನ್ನಡ ರಾಜ್ಯೋತ್ಸವ ಹೀಗೆ ಹಲವು ವಿಶೇಷ ದಿನಗಳು ವರ್ಷದಲ್ಲಿ ಒಮ್ಮೆ ಬರುತ್ತದೆ. ಆದರೆ, ಸಂಘದಲ್ಲಿ ಹಬ್ಬಗಳು ಮತ್ತು ವಿಶೇಷ ದಿನ ಆಚರಿಸಲು ಅದಕ್ಕೆ ಕಾಲ ಮಿತಿ ಇಲ್ಲದಂತಾಗಿದೆ ಎಂದು ಕೆಲವರು ಗೊಣಗುತ್ತಿದ್ದಾರೆ. ಸಂಘ ಇರುವುದು ಕನ್ನಡಿಗರಿಗೆ ತಾತ್ಕಲಿಕ ಆಶ್ರಯ ತಾಣವಾಗಿ, ವಿಶೇಷ ಸಂದರ್ಭದಲ್ಲಿ ದೆಹಲಿ ಕನ್ನಡಿಗರು ಒಟ್ಟುಗೂಡಿ ಸ್ನೇಹ ಸಂಬಂಧ ವಿನಿಮಯ ಮಾಡಿಕೊಳ್ಳಲು. ಆದರೆ, ಸಂಘದ ಅಭಿವೃದ್ಧಿ ಮರೆತು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಂಡು ಸಂಘದ ಧ್ಯೇಯ, ಉದ್ದೇಶವನ್ನು ತಮಗೆ ಮನಸ್ಸು ಇಚ್ಛೆ ಬರಲಾವಣೆ ಮಾಡಿ ವ್ಯಾಪಾರದ ಸರಕಾಗಿ ಪರಿವರ್ತನೆ ಮಾಡಲಾಗಿದೆ ಎನ್ನುವುದು ಇನ್ನು ಕೆಲವು ಸದಸ್ಯರ ಅಭಿಪ್ರಾಯ.
ಸಂಘದ ಚುನಾವಣೆಗಾಗಿ ಸರ್ಕಾರಿ ನೌಕರಿಗೆ ರಾಜೀನಾಮೆ.!?
ಕಳೆದ ಇಪ್ಪತ್ತು ವರ್ಷಗಳಿಂದ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ನಾನಾ ಜವಬ್ದಾರಿ ನಿಭಾಯಿಸಿದ್ದ ಅಭ್ಯರ್ಥಿಯೊಬ್ಬರು ಈ ಸಲವು ಮತ್ತೆ ಪ್ರಮುಖ ಸ್ಥಾನವೊಂದಕ್ಕೆ ಸ್ಪರ್ಧಿಸಿದ್ದಾರೆ. ಹೀಗೆ ಸ್ಫರ್ಧೆ ಮಾಡಿರುವ ವ್ಯಕ್ತಿ ತಮ್ಮ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಸಂಘ ಮತ್ತು ಕನ್ನಡದ ಅಭಿವೃದ್ಧಿಗೆ ದುಡಿಯಲು ಸಿದ್ಧನಾಗಿದ್ದೇನೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದು ಸಂಘದ ಸದಸ್ಯರಲ್ಲಿ ಅಚ್ಚರಿ ಮೂಡಿಸಿದೆ.. ಬದುಕಿಗೆ ಆಸರೆಯಾಗುವ ಕೆಲಸವನ್ನೇ ಬಿಟ್ಟು ಸಂಘದ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಕೆಲವು ಸದಸ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಕಳೆದ ಇಪ್ಪತ್ತು ವರ್ಷಗಳ ಕಾಲ ಕರ್ನಾಟಕ ಸಂಘದಲ್ಲಿದ್ದು ಅಭಿವೃದ್ಧಿ ಮಾಡಲು ಸಾಧ್ಯವಾಗದವರು ಈಗ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮಾಡಲು ಹೊರಟಿರುವುದೇನು ಎಂಬುದು ಹಲವರ ಪ್ರಶ್ನೆ, ಈ ನಡುವೆ ಸರ್ಕಾರಿ ಕೆಲಸವನ್ನೇ ತ್ಯಜಿಸಿ ಚುನಾವಣೆ ಸ್ಪರ್ಧೆ ಮಾಡಿರುವುದು ಅದಕ್ಕಿಂತ ಹೆಚ್ಚು ಆದಾಯ ಸಂಘದ ಹೆಸರಿನಲ್ಲಿ ಬರಬಹುದೇ ಎಂದು ಕೆಲವರು ಪರೋಕ್ಷವಾಗಿ ಭ್ರಷ್ಟಾಚಾರದ ಆರೋಪಗಳನ್ನು ಹೊರಿಸುತ್ತಿದ್ದಾರೆ. ಹಳ್ಳಿಯಿಂದ ನಾನಾ ಕಾರಣಗಳಿಂದ ದೆಹಲಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವವರ ಪೈಕಿ, ಅಭ್ಯರ್ಥಿಯೊಬ್ಬರು ಸಂಘದ ಚುನಾವಣೆಗಾಗಿ ತಮ್ಮ ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡುವ ಅವಶ್ಯಕತೆ ಏನಿದೆ... ಆಲದ ಮರವಾಗಿ ಬೆಳೆದು ನಿಂತಿರುವ ಸಂಘವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಬೇಕಿದೆ ಅಷ್ಟೇ. ಅದಕ್ಕೆ ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟು ಚುನಾವಣೆಗೆ ಸ್ಪರ್ಧೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಮತದಾರರರಲ್ಲಿ ಹುಟ್ಟು ಹಾಕಿದೆ.
ಚುನಾವಣಾ ಕಾವು, ದೆಹಲಿ ಬಿಸಿಲಿಗಿಂತ ಜೋರು
ದೆಹಲಿಯಲ್ಲಿ ಹತ್ತು ಸಾವಿರ ಕನ್ನಡಿಗರಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜನ ಸದಸ್ಯತ್ವ ಪಡೆದಿದ್ದಾರೆ. ಅದರಲ್ಲಿ ಅಂದಾಜು ಒಂದುವರೆ ಸಾವಿರದೊಳಗೆ ಸದಸ್ಯರು ಮತದಾನ ಮಾಡಿದ್ರೆ ಹೆಚ್ಚು. ಒಂದೇ ಪ್ರದೇಶದಲ್ಲಿ ಇರದ ಕನ್ನಡಿಗರ ಒಲೈಕೆ ಎರಡು ತಂಡಗಳಿಂದ ತುಂಬಾ ಜೋರಾಗಿ ನಡೆಯುತ್ತಿದೆ. ಗುರುಗ್ರಾಮ, ನೊಯ್ಡಾ, ನವದೆಹಲಿ, ಜನಕಪುರಿ, ಲಜಪತನಗರ, ಆರ್ ಕೆ. ಪುರಂ, ದ್ವಾರಕ, ಅಶೋಕ ವಿಹಾರ, ಪ್ರೀತಂ ಪುರ, ರೋಹಿಣಿ ಹೀಗೆ ಕೆಲ ಪಾಕೆಟ್ ಗಳಿಗೆ ಅಭ್ಯರ್ಥಿಗಳು ದುಂಬಾಲು ಬಿದ್ದು ಕೊನೆಯ ಹಂತದ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣೆ ಅಂದಮೇಲೆ ಮತದಾರರು ಯಾವ ವರ್ಗದವರಿರಲಿ ಅವರ್ಯಾರಿಗೂ ಆಮಿಷ ಒಡ್ಡದೆ ಅಭ್ಯರ್ಥಿಗಳು ಬಿಟ್ಟಿಲ್ಲ. ಸಾರ್ವಜನಿಕ ಚುನಾವಣೆ ಸಮಯದಲ್ಲಿ ವಸ್ತುಗಳು, ಗಿಫ್ಟ್ ಗಳನ್ನು ಹೇಗೆ ಹಂಚಲಾಗುತ್ತದೆ ಅದೇ ಮಾದರಿಯಲ್ಲಿ ಕುಂಕುಮ ಕೊಟ್ಟು ಸೀರೆ ಹಂಚುವುದು, ಪಾತ್ರೆ ಪಗಡೆ ನೀಡುವುದು, ವಿಶೇಷವಾಗಿ ಮಿಲಿಟರಿ ಮಧ್ಯ ಪಾನ ಹಂಚುವುದು, ಒಂದೇ ಕುಟುಂಬದಲ್ಲಿ ಐದಕ್ಕೂ ಹೆಚ್ಚು ಓಟ್ ಇದ್ದರೆ ಅಂತಹ ಕುಟುಂಬಕ್ಕೆ ವಿಶೇಷ ಆಪರ್ ಗಳು, ಒಂದು ಓಟಿಗೆ ಐದು ಸಾವಿರದಷ್ಟು ಹಣ ಹಂಚಲಾಗುತ್ತಿದೆ ಎನ್ನುವ ಚರ್ಚೆಗಳು ಇದೆ.
ಜೋರು ಸದ್ದು ಮಾಡುತ್ತಿರುವ ಲೋಹದ ಗೂಬೆ ವಿಗ್ರಹ
ಈಗಾಗಲೇ ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆ ಕಾವು ಜೋರಾಗಿದೆ. ಆದರೆ, ಅದಕ್ಕೂ ಮಿಗಿಲಾಗಿ ನಡೆಯುತ್ತಿರುವ ಕರ್ನಾಟಕ ಸಂಘದ ಚುನಾವಣೆ ಬಿರುಸಾಗಿ ಸಾಗಿದೆ. ಈ ಸಲ ವಿಶೇಷವಾಗಿ ಸದ್ದು ಮಾಡುತ್ತಿರುವುದು ಅಭ್ಯರ್ಥಿಯೊಬ್ಬರು ಹಂಚುತ್ತಿರುವ ಲೋಹದ ಗೂಬೆ ಮತ್ತು ಹಸು ಕರುವಿನ ವಿಗ್ರಹದ ಗಿಫ್ಟ್.. ಹಸು ಕರುವಿನ ವಿಗ್ರಹ ಒಪ್ಪಿಕೊಂಡ ಕನ್ನಡಿಗರು, ಗೂಬೆ ವಿಗ್ರಹದ ಬಗ್ಗೆ ಮೂಗು ಮುರಿಯುತ್ತಿದ್ದಾರೆ. ಲಕ್ಷ್ಮೀ ವಾಹನವಾಗಿರುವ ಗೂಬೆಗೆ ವಿಶೇಷ ಆದ್ಯತೆಯನ್ನು ಹಿಂದೂ ಧರ್ಮದಲ್ಲಿ ನೀಡಲಾಗಿದೆ. ಆದ್ರೆ, ಅಭ್ಯರ್ಥಿ ಒಂಟಿ ಗೂಬೆ ಕೊಟ್ಟಿರುವುದು ಸಾಕಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ಮನೆಯಲ್ಲಿ ಒಂಟಿ ಗೂಬೆ ಇಟ್ಟುಕೊಳ್ಳುವುದರಿಂರ ಶುಭ ಮತ್ತು ಅಶುಭ ಫಲಗಳ ಲೆಕ್ಕಾಚಾರದಲ್ಲಿದ್ದಾರೆ ಮತದಾರರು. ಇದರ ಜೊತೆಗೆ ಲಕ್ಷ್ಮೀ ಹಾಗೂ ಜೋಡಿ ಗೂಬೆ ತಂದು ಕೊಡುವಂತೆ ಅಭ್ಯರ್ಥಿಗೆ ಹೇಳಬೇಕು ಎಂದು ಚರ್ಚೆ ಮಾಡುತ್ತಿದ್ದಾರೆ. ಪ್ರಚಾರದ ಸಮಯದಲ್ಲಿ ಸುಮಾರು 600 ರಿಂದ 700 ಗೂಬೆ ಹಾಗೂ ಹಸು ಕರುವಿನ ಪಂಚ ಲೋಹದ ವಿಗ್ರಹಗಳನ್ನು ಮತದಾರರಿಗೆ ಹಂಚಲಾಗಿದೆ. ಒಂದು ವಿಗ್ರಹದ ಬೆಲೆ ಅಂದಾಜು ಎರಡು ಸಾವಿರ ಅಂತಾ ಹೇಳಲಾಗುತ್ತಿದೆ. ಸಾಂಸ್ಕೃತಿಕ ಸಮುಚ್ಚಯ ಅಂತಾ ಕರೆಸಿಕೊಳ್ಳುವ ‘ಕರ್ನಾಟಕ ಸಂಘ’ದ ಚುನಾವಣೆಗಾಗಿ ಹಣದ ಹೊಳೆ, ಗಿಫ್ಟ್ ಗಳ ಸರಮಾಲೆ, ಮೂಲಕ ಲಕ್ಷ ಲಕ್ಷ ಹಣ ವ್ಯಯ ಮಾಡಲಾಗುತ್ತಿದೆ. ಚುನಾವಣೆ ಸಮಯದಲ್ಲಿ ಲಕ್ಷ ಲಕ್ಷ ಖರ್ಚು ಮಾಡುತ್ತಿರುವ ಅಭ್ಯರ್ಥಿಗಳು, ಸಂಘದ ಏಳಿಗಾಗಿ ಇಷ್ಟು ವ್ಯಯ ಮಾಡುತ್ತಿದ್ದರೋ ಅಥವಾ ಗೆದ್ದ ಬಳಿಕ ಅವರ ವೈಯಕ್ತಿಕ ಏಳಿಗೆ ಎಷ್ಟರ ಮಟ್ಟಿಗೆ ಆಗಬಹುದು ಅಂತಾ ಲೆಕ್ಕ ಹಾಕಲಾಗುತ್ತಿದೆ.
ದೆಹಲಿಯಲ್ಲಿರುವ ಬಹುತೇಕರು ಅಕ್ಷರಸ್ಥರುಗಳೇ. ಆದರೂ, ಒಂದು ಸಂಘದ ಚುನಾವಣೆ ಅಂತಾ ನಡೆಯುತ್ತಿರುವಾಗ ಅಕ್ಷರಸ್ಥರಾಗಿ ಅಭ್ಯರ್ಥಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸವೆ ಸರಿ.
……
ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ.


