Site icon PowerTV

ಕಾಡಾನೆ ಹಾವಳಿಗೆ ತತ್ತರಿಸಿದ ಹಾಸನ ಜನತೆ : ಜೀವ ಭಯದಲ್ಲಿ ಬದುಕುತ್ತಿರುವ ಜನ !

ಹಾಸನ: ಮಲೆನಾಡು ಭಾಗವಾದ ಬೇಲೂರು ತಾಲ್ಲೂಕಿನಲ್ಲಿ ಸುಮಾರು ಅರವತ್ತು ಹೆಚ್ಚು ಕಾಡಾನೆಗಳು ನೆಲೆಸಿದ್ದು ರೈತರು ಹಾಗೂ ಕಾಫಿ ಬೆಳೆಗಾರರನ್ನು ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದೆ. ಸುಮಾರು ಇಪ್ಪತ್ತೈದು ಹೆಚ್ಚು ಹಳ್ಳಿಗಳು ಕಾಡಾನೆಗಳ ಪೀಡಿತ ಪ್ರದೇಶಗಳಿದ್ದು ತೆಂಗು, ಬಾಳೆ, ಭತ್ತ, ಕಾಫಿ, ಅಡಿಕೆ, ಮೆಣಸು, ಮೆಕ್ಕೆಜೋಳದ ಬೆಳೆಗಳನ್ನು ಸಂಪೂರ್ಣ ನಾಶ ಮಾಡುತ್ತಿವೆ. ಇದರಿಂದಾಗಿ ಅಪಾರ ರೈತರು ಹಾಗೂ ಕಾಫಿ ಬೆಳೆಗಾರರು ಇನ್ನಿಲ್ಲದ ನಷ್ಟ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದು ಕಾಫಿ ತೋಟಗಳ ಮಾಲೀಕರು ಬಹು ದೊಡ್ಡ ಸಮಸ್ಯೆಗೆ ಸಿಲುಕಿದ್ದಾರೆ.

ಬೇಲೂರು ತಾಲ್ಲೂಕಿನ, ಮಾಳೇರೆಗೆ, ಮದಘಟ್ಟ, ಬಿಕ್ಕೋಡು, ತಗರೆ, ಕೋಗಿನಮನೆ, ಜಗಬೋರನಹಳ್ಳಿ, ಹುಸ್ಕರು, ಅಂಕಿಹಳ್ಳಿ ಪೇಟೆ, ಲಕ್ಕುಂದ, ಕಡೆಗರ್ಜೆ, ವೆಂಕಟಿಪೇಟೆ, ಮೊಹಲ್ಲಾ, ಅರೇಹಳ್ಳಿ ಕೆಳ ಬಿಕ್ಕೋಡು ಸೇರಿದಂತೆ ಸುಮಾರು ಇಪ್ಪತ್ತೈದು ಹಳ್ಳಿಗಳ ಜನ ಕಾಡಾನೆಗಳ ಉಪಟಳದಿಂದ ರೋಸಿ ಹೋಗಿದ್ದಾರೆ. ಕಳೆದ ಆರೇಳು ವರ್ಷಗಳಿಂದ ಬೇಲೂರು ಭಾಗದಲ್ಲಿ ಗಜಪಡೆ ಗಲಾಟೆ ವಿಪರೀತವಾಗಿದೆ. ಹಗಲು-ರಾತ್ರಿ ಎನ್ನದೇ ಜನನಿಬಿಡ ಪ್ರದೇಶಗಳಿಗೆ ದಾಂಗುಡಿ ಇಡುತ್ತಿವೆ. ಇದರಿಂದಾಗಿ ಗ್ರಾಮಸ್ಥರು ಪ್ರತಿನಿತ್ಯ ಜೀವ ಭಯದಲ್ಲೇ ಬದುಕುವಂತಾಗಿದೆ. ಪ್ರತಿ ವರ್ಷ ಕಾಡಾನೆಗಳ ಸಂತತಿ ಹೆಚ್ಚುತ್ತಲೇ ಇದ್ದು ಮಾನವ-ಕಾಡಾನೆ ನಡುವಿನ ಸಂಘರ್ಷ ತಾರಕಕ್ಕೇರುತ್ತಿದೆ.

ಇದನ್ನೂ ಓದಿ : ಮೈಕ್ರೋ ಫೈನಾನ್ಸ್​ ಹಾವಳಿ : ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಮಹಿಳೆ ನೇಣಿಗೆ ಶರಣು !

ಕಳೆದ ಒಂದು ತಿಂಗಳಿನಲ್ಲಿ ಮಾಳೇಗೆರೆ ಗ್ರಾಮದ ಗಿರೀಶ್ ಎಂಬುವವರು ಜೀವನೋಪಾಯಕ್ಕಾಗಿ ಕಳೆದ ಹತ್ತು ವರ್ಷಗಳಿಂದ ತಮ್ಮ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದಿದ್ದ ಸುಮಾರು 220 ಕ್ಕೂ ಫಸಲು ಬಿಡುತ್ತಿದ್ದ ತೆಂಗಿನ ಮರಗಳನ್ನು ಸಂಪೂರ್ಣ ನಾಶ ಮಾಡಿವೆ. ಬುಡ ಸಮೇತ ತೆಂಗಿನಮರಗಳನ್ನು ಕಿತ್ತು ಹಾಕಿ ಸುಳಿಯನ್ನು ತಿಂದು ಹಾಕಿವೆ. ಅಕ್ಕಪಕ್ಕದ ರೈತರು ಬೆಳೆದಿದ್ದ ಅಡಿಕೆ, ಭತ್ತ, ಮೆಕ್ಕೆಜೋಳ, ಮೆಣಸು, ಕಾಫಿ ಗಿಡಗಳನ್ನು ನಾಶಪಡಿಸಿದ್ದು ರೈತರು ಕಣ್ಣೀರಿಡುತ್ತಿದ್ದಾರೆ. ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತಾಗಿದೆ. ಇದರಿಂದಾಗಿ ರೈತರು ತೀವ್ರ ನಷ್ಟ ಅನುಭವಿಸುತ್ತಿದ್ದು ಬದುಕು ಮೂರಬಟ್ಟೆಯಾಗಿದೆ. ಇನ್ನೊಂದೆಡೆ ಕಾಡಾನೆಗಳು ಏಕಾಏಕಿ ದಾಳಿ ಮಾಡುತ್ತಿದ್ದು ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಇದನ್ನೂ ಓದಿ: ಶಾಲಾ ಕಚೇರಿಯಲ್ಲೇ ಶಿಕ್ಷಕಿಯೊಂದಿಗೆ ಹೆಡ್‌ ಮಾಸ್ಟರ್‌ ರೊಮ್ಯಾನ್ಸ್ : ವಿಡಿಯೋ ವೈರಲ್‌!

ಒಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು ಬೇಲೂರು, ಸಕಲೇಶಪುರ, ಆಲೂರು ಭಾಗದ ಅನ್ನದಾತರು ರೋಸಿ ಹೋಗಿದ್ದಾರೆ. ಬರೀ ಭರವಸೆಗಳನ್ನು ನೀಡುತ್ತಿರುವ ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇನ್ನಾದರೂ ಕಣ್ತೆರೆದು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಕಾಫಿ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ. ಇಲ್ಲವಾದಲ್ಲಿ ಇನ್ಮುಂದೆ ಕಾಡಾನೆಯಿಂದ ಒಂದೇ ಒಂದು ಸಾವು ನೋವಾದರೂ ಅಧಿಕಾರಿಗಳಿರಲಿ, ಯಾವುದೇ ಸಚಿವರು ಜನಪ್ರತಿನಿಧಿಗಳು ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಲಿದೆ‌.

Exit mobile version