Site icon PowerTV

ಹನಿಮೂನ್ ಮುಗಿಸಿ ವಾಪಸಾಗುತ್ತಿದ್ದ ದಂಪತಿ ಅಪಘಾತದಲ್ಲಿ ಸಾ*ವು !

ತಿರುವನಂತಪುರ: ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ಇಂದು (ಭಾನುವಾರ) ಮುಂಜಾನೆ ಶಬರಿಮಲೆ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುನಲೂರು-ಮುವಾಟ್ಟುಪುಳ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದಿಂದ ಶಬರಿಮಲೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಕಾರು ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ವಿವಾಹವಾಗಿದ್ದ ಅನು ಮತ್ತು ನಿಖಿಲ್ ಮಧುಚಂದ್ರಕ್ಕೆ (ಹನಿಮೂನ್‌) ಮಲೇಷ್ಯಾಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ವಾಪಸ್‌ ಆಗುತ್ತಿದ್ದ ವೇಳೆ ಮನೆಯಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ದಂಪತಿಗಳು ನವೆಂಬರ್ 30 ರಂದು ವಿವಾಹವಾದರು. ಅವರ ಮನೆಯಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಿಖಿಲ್ ಅವರ ತಂದೆ ಮಥಾಯ್ ಈಪೆನ್ ಮತ್ತು ಅನು ಅವರ ತಂದೆ ಬಿಜು ಪಿ ಜಾರ್ಜ್ ಕೂಡ ಸಾವನ್ನಪ್ಪಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಆಂಧ್ರಪ್ರದೇಶದಿಂದ ಶಬರಿಮಲೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಬಹಳ ಪ್ರಯತ್ನದ ನಂತರ ಕಾರನ್ನು ಕಟ್ ಮಾಡಿ ಒಳಗಿದ್ದವರನ್ನು ರಕ್ಷಿಸಲಾಯಿತು. ಭಾರೀ ಶಬ್ದ ಕೇಳಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಮೊದಲು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಿಜು ಕಾರು ಚಲಾಯಿಸುತ್ತಿದ್ದರು. ನಿದ್ರೆಗೆ ಜಾರಿದ್ದಿರಬಹುದು ಎಂದು ಹೇಳಲಾಗಿದೆ.

Exit mobile version