Site icon PowerTV

ಕಸದಲ್ಲಿ ಸಿಕ್ಕ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ ಸ್ವಚ್ಚತಾ ಸಿಬ್ಬಂದಿಗಳು

ಕಾರ್ಕಳ :  ತಾಲೂಕಿನ ಮಿಯಾರು ಗ್ರಾಮ ಪಂಚಾಯತ್ ನ ಎಸ್.ಎಲ್.ಆರ್.ಎಂ ಸ್ವಚ್ಛತಾ ವಾಹನ ಸಿಬಂದಿಗಳು ಕಸದಲ್ಲಿ ಸಿಕ್ಕಿದ 25 ಗ್ರಾಂ ಚಿನ್ನದ ಸರ ಮತ್ತು ಹಣ ಮರಳಿಸಿ ಪ್ರಾಮಾಣಿಕತೆ ಮೆರೆದು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ

ಮಿಯಾರು ಗ್ರಾಮದ ಬೋರ್ಕಟ್ಟೆ ವ್ಯಾಪ್ತಿಯಲ್ಲಿ ಒಣಕಸ ಸಂಗ್ರಹಿಸಿ ವಿಂಗಡನೆ ಮಾಡುವ ಸಮಯದಲ್ಲಿ ಒಂದು ಪರ್ಸಿನಲ್ಲಿ ಅಂದಾಜು 25 ಗ್ರಾಂ ಹವಳದ ಚಿನ್ನದ ಸರ, 2921.ರೂ. ನಗದು ಸಿಕ್ಕಿದ್ದು,ಕೂಡಲೇ ಸಿಬಂದಿಗಳು ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದು ಪರ್ಸ್ ಪರಿಶೀಲಿಸಿದಾಗ ಗಣೇಶ್ ಶೆಣೈ ಬೊರ್ಕಟ್ಟೆ ಅವರ ಆಧಾರ್ ಕಾರ್ಡ್ ಪ್ರತಿ ಇತ್ತು. ಅವರನ್ನು ಸಂಪರ್ಕಿಸಿದಾಗ ತಾಯಿಗೆ ಕಣ್ಣಿನ ದೃಷ್ಟಿ ಸರಿ ಇಲ್ಲದ ಕಾರಣ ಕಸದಲ್ಲಿ ಹಾಕಿದ್ದು, ಅದನ್ನು ಮನೆಯಲ್ಲಿ ಹುಡುಕಿ ಕೊರಗುತ್ತಿದ್ದ ವಿಚಾರದ ಬಗ್ಗೆ ತಿಳಿಸಿರುತ್ತಾರೆ.

ಸ್ವತ್ತನ್ನು ಗ್ರಾಮ ಪಂಚಾಯತ್ ಮೂಲಕ ಮಾಲೀಕರಿಗೆ ಒಪ್ಪಿಸಲಾಗಿದೆ. ಕಳೆದು ಹೋದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಮರಳಿ ಸಿಕ್ಕಿದ್ದರಿಂದ ಸಂತೋಷಗೊಂಡ ಗಣೇಶ್ ಶೆಣೈ ಕುಟುಂಬ ಗ್ರಾಮ ಪಂಚಾಯತ್ ಎಸ್.ಎಲ್. ಆರ್.ಎಂ ಸಿಬಂದಿಗಳಾದ ಲಲಿತ , ಸುನೀತ ಹಾಗೂ ಕೃಷ್ಣ ಇವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಸಿಬ್ಬಂದಿಗಳ ಪ್ರಾಮಾಣಿಕತೆಗೆ ಸಾರ್ವಜನಿಕ ವಲಯದಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Exit mobile version