Site icon PowerTV

ಭರ್ಜರಿ ರೋಡ್ ಶೋ; ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ

ವಯನಾಡ್ : ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಮಪತ್ರ ಸಲ್ಲಿಸಿದರು. ಭರ್ಜರಿ ರೋಡ್ ಶೋ ಮೂಲಕ ಆಗಮಿಸಿದ ಅವರು ಚುನಾವಣಾ ರಾಜಕೀಯಕ್ಕೆ ಅಡಿ ಇಟ್ಟರು. ಮಂಗಳವಾರ ರಾತ್ರಿಯೇ ಕಾಲಪೆಟ್ಟಾಗೆ ಆಗಮಿಸಿದ ಪ್ರಿಯಾಂಕಾಗೆ ಸಾವಿರಾರು ಕಾರ್ಯಕರ್ತರು ಮತ್ತು ಯುಡಿಎಫ್ ಸದಸ್ಯರು ಭರ್ಜರಿ ಸ್ವಾಗತ ನೀಡಿದರು.

ಇಂದು ಪಕ್ಷದ ಮಾಜಿ ಅಧ್ಯಕ್ಷೆ, ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ ವಾಹನದಲ್ಲಿ ಕಂಡುಬಂದರು. ಪಕ್ಷದ ಹಿರಿಯ ನಾಯಕರು, ಐಯುಎಂಎಲ್ ನಾಯಕರೂ ಈ ಸಂದರ್ಭ ಉಪಸ್ಥಿತರಿದ್ದರು. ಅಮೇಠಿ ಸಂಸದ ಕಿಶೋರ್ ಲಾಲ್ ಶರ್ಮಾ ಸಹ ಪ್ರಿಯಾಂಕಾಗೆ ಸಾಥ್ ನೀಡಿದ್ದರು.

ಸೇರಿದ್ದ ಜನರತ್ತ ಕೈಬಿಸಿ ಸಾಗಿದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ, ಯುಡಿಎಫ್ ಬೆಂಬಲಿಸುವ ಹೆಡ್‌ಬ್ಯಾಂಡ್ ಧರಿಸಿದ್ದ ಬಾಲಕಿಯನ್ನು ಕರೆದು ವಾಹನಕ್ಕೆ ಹತ್ತಿಸಿಕೊಂಡರು. ಪಕ್ಷದ ಧ್ವಜಗಳನ್ನು ಹಿಡಿದಿದ್ದ ಕಾರ್ಯಕರ್ತರು ಪಕ್ಷದ ಬಾವುಟದ ಬಣ್ಣವಿದ್ದ ಬಲೂನುಗಳನ್ನು ಹಾರಿಸಿ, ಡೋಲು ಬಾರಿಸಿ ಸಂಭ್ರಮಿಸಿದರು.

Exit mobile version