Site icon PowerTV

ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಲಿದ್ದೇವೆ : ಮುಖ್ಯ ಮಂತ್ರಿ ವಿಶ್ವಾಸ

ಮಂಡ್ಯ : ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದು ಈ ಬಾರಿ ಕನಿಷ್ಠ ಇಪ್ಪತ್ತು ಲೋಕಸಭಾ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಇಂದು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯವರು 28 ಕ್ಕೆ 28 ನ್ನೂ ಗೆಲ್ಲುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು. ಅವರಿಗೆ ಜನ ಈ ಬಾರಿ ಕಾಂಗ್ರೆಸ್ಸಿಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ತಿಳಿದಿದೆ. ಅದಕ್ಕೆ ಸುಳ್ಳು ಹೇಳುತ್ತಿದ್ದಾರೆ ಎಂದರು.

ಸ್ಥಳೀಯವಾಗಿ ಶಾಸಕರು, ಜಿಲ್ಲಾ ಬ್ಲಾಕ್ ಸಮಿತಿ ಅಧ್ಯಕ್ಷರು, ಮುಖಂಡರು ಯಾರನ್ನು ಸೂಚಿಸುತ್ತಾರೋ ಅವರಿಗೆ ಲೋಕಸಭಾ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಹೇಳಿದರು.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಹಾಸನದಲ್ಲಿ ಹೆಚ್​.ಡಿ ಕುಮಾರಸ್ವಾಮಿ ಟೆಂಪಲ್ ರನ್

ಡಾಲಿ ಧನಂಜಯಗೆ ಟಿಕೆಟ್ : ಈ ಬಗ್ಗೆ ಗೊತ್ತಿಲ್ಲ
ಚಿತ್ರ ನಟ ಡಾಲಿ ಧನಂಜಯ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಮ್ಮ ಪಕ್ಷದಲ್ಲಿ ಈ ಬಗ್ಗೆ ಚರ್ಚೆಯಾಗಿಲ್ಲ ಇದರ ಬಗ್ಗೆ ನನಗೆ ಗೊತ್ತೂ ಇಲ್ಲ ಎಂದರು.

ಜೆಡಿಎಸ್ ಒಂದು ಪ್ರತ್ಯೇಕ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ:
ಕಳೆದ ಬಾರಿ ಮೈತ್ರಿಯಿಂದ ಬಿಜೆಪಿ ಯನ್ನು ಎದುರಿಸಿದ್ದು ಈ ಬಾರಿ ಏಕಾಂಗಿಯಾಗಿ ಬಿಜೆಪಿಯನ್ನು ಎದುರಿಸುತ್ತಿರುವ ಬಗ್ಗೆ ಮಾತನಾಡಿ ಈಗ ಒಂದೇ ವಿರೋಧ ಪಕ್ಷವಿದೆ. ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗಿದೆ. ಜೆಡಿಎಸ್ ಒಂದು ಪ್ರತ್ಯೇಕ ಪಕ್ಷ ವಾಗಿ ಕೆಲಸ ಮಾಡುತ್ತಿಲ್ಲ. ಬಿಜೆಪಿ ಯವರೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಗ್ಯಾರಂಟಿಗಳು ಮಾತ್ರವಲ್ಲದೆ ಮೂಲಸೌಕರ್ಯ ಅಭಿವೃದ್ಧಿ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೂ ಒತ್ತು ನೀಡುವ ಕೆಲಸ ಮಾಡಿದ್ದೇವೆ ಎಂದರು.

ಕೇಂದ್ರದಿಂದ 1.87 ಲಕ್ಷ ಕೋಟಿ ರೂ.ಗಳು ನಮಗೆ ನಷ್ಟವಾಗಿದೆ. ಆ ಅನುದಾನ ಬಂದರೆ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ರಾಜ್ಯಕ್ಕೆ ಕೊಡಬಹುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Exit mobile version