Site icon PowerTV

Karnataka Budget 2024: ಬಜೆಟ್​ಗೆ ಬಹಿಷ್ಕಾರ ಹಾಕಿ ಸದನದಿಂದ ಹೊರ ನಡೆದ ವಿಪಕ್ಷ 

ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಮುನ್ನೋಟ ನೀಡುವ 2024-25ನೇ ಸಾಲಿನ ರಾಜ್ಯ ಬಜೆಟ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸುವ ವೇಳೆ ಕೇಂದ್ರ ಸರ್ಕಾರದ ಅನ್ಯಾಯವನ್ನು ಕಟುವಾಗಿ ಟೀಕಿಸಿದ್ದನ್ನು ಖಂಡಿಸಿ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದರು.

ಕೂಡಲೇ ಎದ್ದು ನಿಂತು ಸಿದ್ದರಾಮಯ್ಯ ಅವರ ಬಜೆಟ್‌ ಭಾಷಣೆಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌, “ಬಜೆಟ್​ ಅನ್ನು ಕೇಂದ್ರದ ವಿರುದ್ಧ ಟೀಕೆ ಮಾಡಲು ವೇದಿಕೆಯಾಗಿ ಬಳಸಿಕೊಳ್ಳುತ್ತೀರಾ?” ಎಂದು ಕಿಡಿ ಕಾರಿದರು.

“ಸಿದ್ದರಾಮಯ್ಯ ಅವರು 15ನೇ ಬಜೆಟ್‌ ಮಂಡಿಸುತ್ತಿದ್ದಾರೆ. ಇದು ಅವರ ದಾಖಲೆ ಬಜೆಟ್‌ ಆಗಿದ್ದರೂ ಇಂತಹ ಸಣ್ಣತನ ಪ್ರದರ್ಶನ ನಾನು ಊಹಿಸಿರಲಿಲ್ಲ” ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಎಲ್ಲ ಸದಸ್ಯರು ಆರ್‌ ಅಶೋಕ್‌ ಮಾತಿಗೆ ಧ್ವನಿಗೂಡಿಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಬಿಜೆಪಿ ನಾಯಕರು ಬಜೆಟ್​ಗೆ ಬಹಿಷ್ಕಾರ ಹಾಕಿ ಹೊರನಡೆದರು.

ಧಿಕ್ಕಾರ ಕೂಗುತ್ತಾ ಸದನದಿಂದ ಹೊರಬಂದ ಬಿಜೆಪಿ ಶಾಸಕರು, ‘ಏನಿಲ್ಲಾ ಏನಿಲ್ಲಾ, ಬುರುಡೆ ಬುರುಡೆ’ ಎಂದು ಕೂಗಿದರು. ವಿಧಾನಸಭೆ ಪ್ರವೇಶದ್ವಾರದ ಬಾಗಿಲಿಗೆ ಬಿಜೆಪಿ ಶಾಸಕರು ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.

Exit mobile version