Site icon PowerTV

Woman death: ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಮಂಗಳೂರು: ಮಹಿಳೆಯೊಬ್ಬರು ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಬಳಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ರೈಲಿನಲ್ಲಿ ಬಂಟ್ವಾಳದ ಬಳಿ ನೇತ್ರಾವತಿ ನದಿಗೆ ಹಾರಿ ಆಕೆ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ.

ತುಮಕೂರಿನ ಮಧುಗಿರಿ ನಿವಾಸಿ ನಯನಾ ಎಂ.ಜಿ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ಮಧುಗಿರಿ ತಾಲೂಕಿನ ಪಡಸಾಲಹಟ್ಟಿ ಮಿಡಿಗೇಶಿ ಹೋಬಳಿಯವರು. ಇವರು ಅವಿವಾಹಿತೆ. ಅವರು ಪ್ರಯಾಣಿಸುತ್ತಿದ್ದ ರೈಲು ಬೆಳಗ್ಗೆ ಮಂಗಳೂರಿನಿಂದ ಹೊರಟು ಬೆಂಗಳೂರಿಗೆ ಬರುತ್ತಿತ್ತು. ಮುಂದೆ ಬಿ.ಸಿ. ರೋಡ್‌ ನಿಲ್ದಾಣ ದಾಟಿ ರೈಲು ಸಾಗುತ್ತಿತ್ತು.

ರೈಲು ನೇತ್ರಾವತಿ ನದಿಯ ಸೇತುವೆ ಬಳಿ ಬಂದಾಗ ನಯನಾ ಅವರು ಬಾಗಿಲಿನ ಮೂಲಕ ರೈಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ಸೇರಿದರು. ಪೊಲೀಸರು ಸಾರ್ವಜನಿಕರ ಸಹಕಾರದಿಂದ ಶವವನ್ನು ನದಿಯಿಂದ ಮೇಲಕ್ಕೆ ಎತ್ತಿದ್ದಾರೆ. ಮುಳುಗುತಜ್ಞ ಮಹಮ್ಮದ್ ತಂಡ ಶವವನ್ನು ಮೇಲೆತ್ತುವಲ್ಲಿ ದೊಡ್ಡ ಪಾತ್ರ ವಹಿಸಿತು. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿನಲ್ಲಿ ನಯನಾ ಅವರು ಒಬ್ಬರೇ ಪ್ರಯಾಣಿಸುತ್ತಿದ್ದರೇ ಅಥವಾ ಕುಟುಂಬ ಸಮೇತವಾಗಿ ಸಾಗುತ್ತಿದ್ದರೇ? ಅವರು ಎಲ್ಲಿಂದ ಬಂದಿದ್ದರು? ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಯಾಕೆ ಮಾಡಿದರು? ರೈಲಿನಿಂದ ಜಿಗಿಯುವ ಅಪಾಯಕಾರಿ ನಿರ್ಧಾರ ಯಾಕೆ ಮಾಡಿದರು ಎಂಬ ಅಂಶಗಳ ಮೇಲೆ ಪೊಲೀಸರು ಬೆಳಕು ಚೆಲ್ಲಬೇಕಾಗಿದೆ.

Exit mobile version