Site icon PowerTV

ಜೈಲಿನಲ್ಲಿ ಗರ್ಭಿಣಿಯರಾಗುತ್ತಿರುವ ಮಹಿಳಾ ಕೈದಿಗಳು: 196 ಶಿಶುಗಳು ಜನನ 

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸೆರೆವಾಸ ಅನುಭವಿಸುತ್ತಿರುವ ಮಹಿಳಾ ಕೈದಿಗಳು ಗರ್ಭಿಣಿಯರಾಗುತ್ತಿದ್ದು ರಾಜ್ಯದ ವಿವಿಧ ಜೈಲುಗಳಲ್ಲಿ ಸುಮಾರು 196 ಶಿಶುಗಳು ಜನಿಸಿವೆ ಎಂದು ಕೋಲ್ಕತ್ತಾ ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿದೆ

ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜೈಲು ಸುಧಾರಣೆಗಳು ಮತ್ತು ಸುಧಾರಣಾ ಗೃಹಗಳಿಗೆ ಸಂಬಂಧಿಸಿದ ಪ್ರಕರಣವನ್ನು ಉಲ್ಲೇಖಿಸುವಾಗ ಅಮಿಕಸ್ ಕ್ಯೂರಿ ಈ ಹೇಳಿಕೆ ನೀಡಿದ್ದಾರೆ.

ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಸುಪ್ರತಿಮ್ ಭಟ್ಟಾಚಾರ್ಯ ಅವರಿದ್ದ ವಿಭಾಗೀಯ ಪೀಠ ಮುಂದಿನ ಸೋಮವಾರ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಭಾಗೀಯ ಪೀಠದೆದುರು ಪ್ರಕರಣ ಪ್ರಸ್ತಾಪಿಸುವಂತೆ ಸೂಚಿಸಿದೆ.

ಈ ಕಳವಳ ದೂರವಾಗಬೇಕೆಂದರೆ ಸುಧಾರಣಾ ಗೃಹಗಳ ಪುರುಷ ಉದ್ಯೋಗಿಗಳು ಮಹಿಳಾ ಕೈದಿಗಳಿರುವ ಆವರಣ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂದು ಅಮಿಕಸ್ ಸಲಹೆ ನೀಡಿದರು. ಅಲ್ಲದೆ ಅವರು ನೀಡಿರುವ ವಿವಿಧ ಸಲಹೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.

“ಈ ಎಲ್ಲಾ ವಿಷಯಗಳ ಬಗ್ಗೆ ಪರಿಣಾಮಕಾರಿ ತೀರ್ಪು ನೀಡುವ ಸಲುವಾಗಿ, ಪ್ರಕರಣವನ್ನು ಕ್ರಿಮಿನಲ್ ವಿಚಾರಣೆ ನಡೆಸಲಿರುವ ವಿಭಾಗೀಯ ಪೀಠದ ಮುಂದೆ ಇರಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ” ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ತಾನು ಸುಧಾರಣಾ ಗೃಹವೊಂದಕ್ಕೆ ಭೇಟಿ ನೀಡಿದ್ದೆ, ಅಲ್ಲಿ ಒಬ್ಬ ಮಹಿಳೆ ಗರ್ಭಿಣಿಯಾಗಿರುವುದನ್ನು ಕಂಡೆ. ಜೈಲಿನಲ್ಲಿ ಜನಿಸಿದ 15 ಮಕ್ಕಳು ಕೂಡ ಈ ಸುಧಾರಣಾ ಗೃಹದಲ್ಲಿದ್ದರು ಎಂದು ಅಮಿಕಸ್‌ ಅವರು ಈ ಸಂದರ್ಭದಲ್ಲಿ ವಿವರಿಸಿದ್ದಾರೆ.

 

Exit mobile version