Site icon PowerTV

ಅಂಬೇಡ್ಕರ್​ಗೆ ಭಾರತ ರತ್ನ ನೀಡದೆ, ತನ್ನ ಕುಟುಂಬಕ್ಕೆ ಕೊಟ್ಟಿದೆ : ಪ್ರಧಾನಿ ಮೋದಿ

ನವದೆಹಲಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷಕ್ಕೆ ತನ್ನ ಕುಟುಂಬಕ್ಕೆ ತಾವೇ ಭಾರತ ರತ್ನ ನೀಡಲು ಸಾಧ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕುಟುಕಿದರು.

ಕೇಂದ್ರ ಬಿಜೆಪಿ ಸರ್ಕಾರ ಅವಧಿಯ ಕೊನೆಯ ಅಧಿವೇಶನವನ್ನುದ್ದೇಶಿಸಿ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ಗ್ಯಾರಂಟಿ ಇಲ್ಲ. ಅವರ ನೀತಿಗಳಿಗೆ ಗ್ಯಾರಂಟಿ ಇಲ್ಲ. ಅಂತಹ ಜನಗಳು ಇಂದು ಮೋದಿ ಗ್ಯಾರಂಟಿಯ ಬಗ್ಗೆ ಸವಾಲೆಸೆಯುತ್ತಿದ್ದಾರೆ ಎಂದು ಚಾಟಿ ಬೀಸಿದರು.

ದೇಶದಲ್ಲಿ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿರುವುದನ್ನೂ ಸಹಿಸದ ಕಾಂಗ್ರೆಸ್ಸಿಗರು, ಅವರ ಕುರಿತೂ ಅಗೌರವದಿಂದ ಮಾತನಾಡುತ್ತಿದ್ದಾರೆ ಎಂದು ಛೇಡಿಸಿದರು.

ಕಾಂಗ್ರೆಸ್ ಪಕ್ಷದಿಂದ ಉತ್ತರ-ದಕ್ಷಿಣ ವಿಭಜನೆ

ಕಾಂಗ್ರೆಸ್ ಪಕ್ಷ ತನ್ನ ಯೋಚನೆಯಲ್ಲಿ ಹಳತಾಗಿದೆ. ಕಾಂಗ್ರೆಸ್‌ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷವು ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸುವ ಮೂಲಕ ದೇಶವನ್ನು ಇಬ್ಭಾಗ ಮಾಡುವ ಹೇಳಿಕೆಗಳನ್ನು ಸೃಷ್ಟಿಸುತ್ತಿದೆ ಎಂದು ಟೀಕಿಸಿದರು.

ಕಾಂಗ್ರೆಸ್‌ನ 10 ವರ್ಷಗಳ ಇತಿಹಾಸ ನೋಡಿ

ಕಾಂಗ್ರೆಸ್‌ನ ಕಳೆದ 10 ವರ್ಷಗಳ ಇತಿಹಾಸ ನೋಡಿ. ಭಾರತವು ಐದು ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿತ್ತು. ಆದರೆ, ನಮ್ಮ 10 ವರ್ಷದಲ್ಲಿ ನಾವು ಟಾಪ್ 5 ಆರ್ಥಿಕತೆಗಳಲ್ಲಿ ಒಬ್ಬರಾಗಿದ್ದೇವೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಒಂದು ಘೋಷಣೆ ಅಲ್ಲ. ಅದು ಮೋದಿಯ ಗ್ಯಾರಂಟಿ ಎಂದು ಕಾಂಗ್ರೆಸ್ಸಿಗರಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದರು.

Exit mobile version