Site icon PowerTV

ಸಿದ್ದರಾಮಯ್ಯ ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸಲು ಹೊರಟಿದ್ದಾರೆ : ಬಿ.ವೈ. ವಿಜಯೇಂದ್ರ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸಲು ಹೊರಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕುಟುಕಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷಕ್ಕೂ ಹೆಚ್ಚು ಕಡತಗಳು ವಿಲೇವಾರಿ ಬಾಕಿ ಇರುವ ಬಗ್ಗೆ ಟ್ವೀಟ್ ಮಾಡಿರುವ ಅವರು, ಇದು ಆಮೆ ನಡಿಗೆಯ ಸರ್ಕಾರವೂ ಅಲ್ಲ. ನಿಂತ ನೀರಿನ ಸರ್ಕಾರ ಎಂಬುದನ್ನು ಕುಂತಲ್ಲೇ ಕೂತು ಧೂಳು ತಿನ್ನುತ್ತಿರುವ 1.37 ಲಕ್ಷ ಕಡತಗಳು ಸಾಕ್ಷಿ ನುಡಿಯುತ್ತಿವೆ ಎಂದು ಛೇಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಇಡುವ ಮಾತು ಹಾಗಿರಲಿ. ಜನರ ಕಷ್ಟ, ನಿವೇದನೆಗಳಿಗೆ ನಿತ್ಯ ಸ್ಪಂದಿಸಬೇಕಿದ್ದ ಕಡತಗಳೂ ಚಲನ ಶೀಲತೆ ಕಳೆದು ಕೊಂಡಿವೆ ಎಂದರೆ, ಈ ಸರ್ಕಾರ ಸ್ವಾಧೀನ ಕಳೆದು ಕೊಂಡಿದೆ ಎಂದೇ ಅರ್ಥೈಸಬೇಕಾಗಿದೆ ಎಂದು ಟೀಕಿಸಿದ್ದಾರೆ.

ಮಂತ್ರಿಗಳು ಜವಾಬ್ದಾರಿ ಮರೆತರೆ..!

ಸರ್ಕಾರದ ಮಂತ್ರಿಗಳು ಜವಾಬ್ದಾರಿ ಮರೆತರೆ ಅಧಿಕಾರಿಗಳು ನಿಷ್ಕ್ರೀಯರಾಗುತ್ತಾರೆ. ಆಗ ಆಡಳಿತ ಯಂತ್ರವೂ ನಿಯಂತ್ರಣ ಕಳೆದು ಕೊಳ್ಳುತ್ತದೆ. ಇದರ ಪರಿಣಾಮದ ಬಿಸಿ ಅನುಭವಿಸುವವರು ಜನರು ಮಾತ್ರ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಸರ್ಕಾರ ಎಚ್ಚೆತ್ತು ಕೊಳ್ಳಲಿ. ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲಿ, ಈ ನಿಟ್ಟಿನಲ್ಲಿ ಈಗಷ್ಟೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿಗಳು ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸಲು ಹೊರಟಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಜಾಡಿಸಿದ್ದಾರೆ.

Exit mobile version