Site icon PowerTV

1 ಲಕ್ಷ ಲಂಚ ಜೇಬಿಗಿಳಿಸಿದ ಬೆಸ್ಕಾಂ ಎಂಜಿನಿಯರ್ ‘ಲೋಕಾ’ ಬಲೆಗೆ

ವಿಜಯನಗರ : ವಿದ್ಯುತ್ ಸಂಪರ್ಕ ಕಲ್ಪಿಸಲು ಬರೋಬ್ಬರಿ 1 ಲಕ್ಷ ಅಡ್ವಾನ್ಸ್​ ಜೇಬಿಗಿಳಿಸಿದ ಬೆಸ್ಕಾಂ ಕಿರಿಯ ಎಂಜಿನಿಯರ್​ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಬೆಸ್ಕಾಂ ಉತ್ತರ-2 ವಿಜಯನಗರ ಉಪ ವಿಭಾಗದ ಕಿರಿಯ ಎಂಜಿನಿಯರ್ ಪ್ರಕಾಶ್‌ ಅವರೇ ಲೋಕಾ ಖೆಡ್ಡಾಗೆ ಬಿದ್ದವರು. ಬಹುಮಹಡಿ ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು 1 ಲಕ್ಷ ಲಂಚ ಪಡೆದ ಆರೋಪದಡಿ ಅವರನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಜಯನಗರದ ರತ್ನಾ ಆ್ಯಂಡ್ ಉಮರಾಣಿ ಎಂಬ ಬಹುಮಹಡಿ ಕಟ್ಟಡಕ್ಕೆ ನೀಡಿದ್ದ ವಿದ್ಯುತ್ ಸಂಪರ್ಕ ಮರು ಚಾಲನೆಗೊಳಿಸಬೇಕಿತ್ತು. ಇದಕ್ಕಾಗಿ ವಿದ್ಯುತ್ ಕಾಮಗಾರಿಗಳ ಗುತ್ತಿಗೆದಾರ ಮಂಜೇಶ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡಲು ಬರೋಬ್ಬರಿ 2.50 ಲಕ್ಷ ರೂಪಾಯಿ ಲಂಚ ನೀಡುವಂತೆ ಬಂಧಿತ ಪ್ರಕಾಶ್ ಬೇಡಿಕೆ ಇಟ್ಟಿದ್ದರು.

1 ಲಕ್ಷ ರೂ. ಸಮೇತ ಸಿಕ್ಕಿಬಿದ್ದ ಅಧಿಕಾರಿ

ಗುತ್ತಿಗೆದಾರ ಮಂಜೇಶ್ 1 ಲಕ್ಷ ರೂ. ಕೊಡುವುದಾಗಿ ಹೇಳಿದ್ದರು. ಈ ಬಗ್ಗೆ ಮಂಜೇಶ್ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕಕ್ಕೆ ದೂರು ನೀಡಿದ್ದರು. ಆರೋಪಿಯ ಸೂಚನೆಯಂತೆ ಬೆಸ್ಕಾಂ ವಿಜಯನಗರ ಉಪ ವಿಭಾಗದ ಕಚೇರಿಯಲ್ಲಿ ಸಂಜೆ ಭೇಟಿ ಮಾಡಿದ ಮಂಜೇಶ್ 1 ಲಕ್ಷ ಲಂಚದ ಹಣವನ್ನು ಪ್ರಕಾಶ್​ಗೆ ನೀಡಿದ್ದರು. ಪ್ರಕಾಶ್ ಹಣ ಪಡೆಯುತ್ತಿದ್ದಂತೆಯೇ ದಾಳಿ ಮಾಡಿದ ಲೋಕಾಯುಕ್ತ ಪೊಲೀಸರು ಅವರನ್ನು ರೆಡ್​ ಹ್ಯಾಂಡ್​ ಆಗಿ ಅರೆಸ್ಟ್​ ಮಾಡಿದ್ದಾರೆ.

Exit mobile version