Site icon PowerTV

ಜಮೀನು ವಿಚಾರ.. ಕಾರಿನಿಂದ ಬೈಕ್​ಗೆ ಗುದ್ದಿ, ಕೊಲೆಗೆ ಯತ್ನಿಸಿದ ಕಿರಾತಕರು

ಆನೇಕಲ್ : ಜಮೀನು ವಿಚಾರವಾಗಿ ಇಬ್ಬರು ವ್ಯಕ್ತಿಗಳನ್ನು ಕಾರಿನಿಂದ ಗುದ್ದಿ ಮರಣಾಂತಿಕವಾಗಿ ಹಲ್ಲೆ ನಡೆಸಿರುವಂತಹ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಉಪ ವಿಭಾಗದ ಬನ್ನೇರುಘಟ್ಟ ಠಾಣ ವ್ಯಾಪ್ತಿಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕನ್ನಾಯಕನ ಅಗ್ರಹಾರದ ಗ್ರಾಮ ಪಂಚಾಯಿತಿ ಸದಸ್ಯ ರವಿಚಂದ್ರ ಹಾಗೂ ಮಂಜುನಾಥ್ ಹಲ್ಲೆಗೊಳಗಾದ ವ್ಯಕ್ತಿಗಳು. ಬನ್ನೇರುಘಟ್ಟ ಪೊಲೀಸರು ಆರೋಪಿಗಳನ್ನು ಬಂಧಿಸಿ, ಜೈಲುಗಟ್ಟಿದ್ದಾರೆ.

ರವಿಚಂದ್ರ ಅವರಿಗೆ ಹಾಗೂ ಕುಲುಮೆ ಪಾಳ್ಯ ವಾಸಿಗಳಾದ ಕೃಷ್ಣಪ್ಪ ಕುಟುಂಬದವರಿಗೆ ಜಮೀನು ವಿಚಾರವಾಗಿ ವಿವಾದ ಏರ್ಪಟ್ಟಿತ್ತು. ಈ ಪ್ರಕರಣ ಕೋರ್ಟ್ ಮೆಟಿಲೇರಿದ್ದು ಇನ್ನೇನು ಕೆಲ ದಿನಗಳಲ್ಲಿ ರವಿಚಂದ್ರ ಅವರ ಪರವಾಗಿ ಕೋರ್ಟ್ ನಲ್ಲಿ ಆದೇಶ ಬರುವ ಸಾಧ್ಯತೆ ಇತ್ತು. ಹೀಗಿರುವಾಗ ತಮ್ಮ ಜಮೀನನ್ನು ನೋಡಿಕೊಂಡು ಬರೋಣ ಎಂದು ರವಿಚಂದ್ರ ಹಾಗೂ ಮಂಜುನಾಥ್ ಇಬ್ಬರು ಬೈಕ್ ನಲ್ಲಿ ಹೋಗಿ ವಾಪಸ್ ಬರುತ್ತಿದ್ದಾಗ ಏಕಾಏಕಿ ಕೃಷ್ಣಪ್ಪ ಹಾಗೂ ಅವರ ಮಕ್ಕಳಾದ ಸಾಗರ್ ಆನಂದ್ ಜೊತೆಗೂಡಿ ಬಂದು ಏಕಾಏಕಿ ಬೈಕ್​ಗೆ ಕಾರಿನಲ್ಲಿ ಗುದ್ದಿದ್ದಾರೆ.

ಕಲ್ಲು ಎಸೆದು ದೊಣ್ಣೆಗಳಿಂದ ಹಲ್ಲೆ

ಇವರು ಕೆಳಗೆ ಬಿದ್ದ ತಕ್ಷಣ ಸ್ನೇಹಿತರ ಜೊತೆಗೂಡಿ ಮಂಜುನಾಥ್ ಹಾಗೂ ರವಿಚಂದ್ರನ್ ಮೇಲೆ ಕಲ್ಲನ್ನು ಎಸೆದು, ದೊಣ್ಣೆಗಳಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನವನ್ನು ಮಾಡಿದ್ದಾರೆ. ಇದೇ ಸಮಯದಲ್ಲಿ ಮಂಜುನಾಥ್ ತಪ್ಪಿಸಿಕೊಂಡು ತಮ್ಮ ಸ್ನೇಹಿತರನ್ನು ಕರೆಸಿದಾಗ ಅಲ್ಲಿಂದ ಎಲ್ಲರೂ ಪರಾರಿಯಾಗಿದ್ದಾರೆ. ಈ ಬಗ್ಗೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version