Site icon PowerTV

ಶೆಟ್ಟರ್ ಈಗ ಹೋಗಿದಾರೆ, ಮುಂದೆ ಯಾರು ಹೋಗ್ತಾರೋ ಗೊತ್ತಿಲ್ಲ : ಸತೀಶ್ ಜಾರಕಿಹೊಳಿ

ಹಾವೇರಿ : ಜಗದೀಶ್ ಶೆಟ್ಟರ್ ಈಗ ಹೋಗಿದಾರೆ, ಮುಂದೆ ಯಾರು ಹೋಗ್ತಾರೋ ಗೊತ್ತಿಲ್ಲ. ಎಲ್ಲರೂ ಇರ್ತಾರೆ ಅನ್ನೋ ಆಶಾಭಾವನೆ ಅಷ್ಟೆ ನಮ್ಮದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಾರು ಹೋಗ್ತಾರೋ ಬಿಡ್ತಾರೋ ನಮ್ಮ ಕೈಲಿ ಇಲ್ಲ. ಹೋಗೋ ಮನಸ್ಸಿದ್ದರೆ ತಡಿಲಿಕ್ಕೆ ಆಗಲ್ಲ. ಹೋಗಬೇಕೆಂದರೆ ನಾವೇನು ಮಾಡಲು ಆಗಲ್ಲ ಎಂದು ತಿಳಿಸಿದರು.

ಕಾಂಗ್ರೆಸ್ ನಲ್ಲಿ ಉಸಿರಯಗಟ್ಟೋ ವಾತಾವರಣ ಇದೆ ಅಂದರೆ ಬಿಜೆಪಿಯಿಂದ ಯಾಕೆ ಕಾಂಗ್ರೆಸ್ ಗೆ ಬಂದರು ಅವರು? ಅವಾಗ ಬರುವಾಗ ಏನಾಗಿತ್ತಂತೆ ಅಲ್ಲಿ? ನಮ್ಮದೇ ಪಕ್ಷ ಇದೆ, ನಮ್ದೇ ಆದ ವೋಟ್ ಬ್ಯಾಂಕ್ ಇದೆ. ನಮ್ಮ ಸ್ವಂತ ಶಕ್ತಿಯಿಂದ ರಾಜ್ಯದಲ್ಲಿ ಗೆದ್ದಿದ್ದೀವಿ. ಅವರಿಂದ ಅಧಿಕಾರಕ್ಕೆ ಬಂತು, ಇವರಿಂದ ಬಂತು ಅಂತ ಹೇಳಲಿಕ್ಕೆ ಆಗಲ್ಲ, ಪಕ್ಷದಿಂದ ಗೆದ್ದಿದ್ದೀವಿ ಅಷ್ಟೇ ಎಂದು ಕುಟುಕಿದರು.

BJPಯವರು ಯಾರಾದರೂ ನಿಲ್ಲಲೇಬೇಕಲ್ವಾ?

ಜಗದೀಶ್ ಶೆಟ್ಟರ್ ಬೆಳಗಾವಿಯಲ್ಲಿ ಸ್ಪರ್ಧೆ ವಿಚಾರವಾಗಿ ಮಾತನಾಡಿ, ನನಗೆ ಗೊತ್ತಿಲ್ಲ ಎಲ್ಲಿ ನಿಲ್ತಾರೋ. ಬಿಜೆಪಿಯವರು ಯಾರಾದರೂ ನಿಲ್ಲಲೇಬೇಕಲ್ವಾ ಬೆಳಗಾವಿಲಿ. ನಿಲ್ಲೋದು ಬಿಡೋದು ಅವರ ಪಕ್ಷಕ್ಕೆ ಬಿಟ್ಟಿದ್ದು. ನಮಗೆ ಸಂಬಂಧಿಸಿದ ವಿಷಯ ಅಲ್ಲ ಅದು ಎಂದು ಹೇಳಿದರು.

ಜಗದೀಶ್ ಶೆಟ್ಟರ್ ಒಬ್ರನ್ನೇ ಲೆಕ್ಕ ಹಾಕಲು ಆಗಲ್ಲ

ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಆದರೆ ಬೆಳಗಾವಿ ಬಿಜೆಪಿಗೆ ದೊಡ್ಡ ಲಾಭ ಆಗಲಿದೆಯೇ? ಲಿಂಗಾಯತ ಮತಗಳು ಇಬ್ಭಾಗವಾಗುತ್ತವೆಯೇ? ಎಂಬ ಪ್ರಶ್ನೆಗೆ, ಒಬ್ಬ ವ್ಯಕ್ತಿಯಿಂದ ಆಗಲ್ಲ ಪಕ್ಷದ ಲೆಕ್ಕ ಹಿಡಿಯಬೇಕು. ಸತೀಶ್ ಜಾರಕಿಹೊಳಿ, ಶೆಟ್ಟರ್ ಒಬ್ರನ್ನೇ ಲೆಕ್ಕ ಹಾಕಲು ಆಗಲ್ಲ. ಚುನಾವಣೆ ಬಂದಾಗ ನೋಡೋಣ, ಯಾರು ಯಾವ ಕಡೆ ಆಗ್ತಾರೆ ಅಂತ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

Exit mobile version