Site icon PowerTV

ಅದ್ಧೂರಿಯ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ

ಕೊಪ್ಪಳ : ‘ದಕ್ಷಿಣ ಭಾರತದ ಕುಂಭ ಮೇಳ’ಎಂದು ಖ್ಯಾತಿ ಪಡೆದ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.

ಜನಸ್ತೋಮದ ಮಧ್ಯೆ ಶ್ರೀ ಗವಿಸಿದ್ಧೇಶ್ವರ ಕತೃ ಗದ್ದುಗೆಯಿಂದ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮಠದ ಮುಂದಿರುವ ರಥದ ಬಳಿಗೆ ಕರೆ ತರಲಾಯಿತು. ಭಕ್ತರ ಭಕ್ತಿಗೆ ಬರ ಇಲ್ಲ ಎನ್ನುವುದನ್ನು ಭಕ್ತ ಸಮೂಹ ಸಾರಿತು.

ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿದ ಮೇಲೆ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಪೂಜೆ ಸಲ್ಲಿಸಿದರು. ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಧ್ವಜಾರೋಹಣ ನೆರವೇರಿಸಿ, ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ರುದ್ರಾಕ್ಷಿ ಹಾಗೂ ಬೃಹತ್‌ ಹೂವಿನಿಂದ ಅಲಂಕಾರಗೊಂಡ ರಥ ಎಳೆಯುವುದಕ್ಕೆ ಭಕ್ತರು ಮುಂದಾದರು. ಭಕ್ತರು ಜಯಘೋಷ ಹಾಕುತ್ತ, ಸಕಲ ವಾದ್ಯವೈಭಗಳೊಂದಿಗೆ ರಥವನ್ನು ಮುಂದಕ್ಕೆ ಎಳೆದರು.

ಗವಿಸಿದ್ಧೇಶ್ವರ ಶ್ರೀಗೆ ಜಯ ಘೋಷಣೆ

ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಗೆ ಜಯ ಘೋಷಣೆ ಹಾಕುತ್ತ ಭಕ್ತಿ ಸಮರ್ಪಿಸಿದರು. ಮಹಾದ್ವಾರದಿಂದ ಪಾದಗಟ್ಟೆ ತಲುಪಿ ಮೂಲ ಸ್ಥಳಕ್ಕೆ ರಥ ಆಗಮಿಸಿದಾಗ ಭಕ್ತರು ಚಪ್ಪಾಳೆ ತಟ್ಟಿ ಭಕ್ತಿಯಿಂದ ನಮಿಸಿದರು. ಶ್ರೀ ಗವಿಸಿದ್ಧೇಶ್ವರ ಮಠದ ಕತೃಗದ್ದುಗೆಗೆ ದೀಢ್‌ ನಮಸ್ಕಾರ ಹಾಕಿ ಕತೃ ಗದ್ದುಗೆಯ ದರ್ಶನ ಪಡೆದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗಿ

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಚಿವರಾದ ಡಿ.ಕೆ. ಶಿವಕುಮಾರ್, ಶಿವರಾಜ ತಂಗಡಗಿ, ಬಸವರಾಜ ರಾಯರೆಡ್ಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಗಾಲಿ ಜನಾರ್ದನ ರೆಡ್ಡಿ, ಹಂಪನಗೌಡ ಬಾದರ್ಲಿ ಸೇರಿ ಇತರ ಗಣ್ಯರು ಉಪಸ್ಥಿತರಿದ್ದರು.

Exit mobile version