Site icon PowerTV

PSI ಮರುಪರೀಕ್ಷೆ ಸುಖಾಂತ್ಯ : ಪರೀಕ್ಷೆ ಬರೆದ 54 ಸಾವಿರ ಅಭ್ಯರ್ಥಿಗಳು

ಬೆಂಗಳೂರು : ಪಿಎಸ್ಐ ಅಕ್ರಮ ನಡೆದು 3 ವರ್ಷಗಳ ಬಳಿಕ‌ ಇಂದು (ಜನವರಿ 23) ಪಿಎಸ್‌ಐ ನೇಮಕಾತಿ ಮರುಪರೀಕ್ಷೆ ಖಾಕಿ ಕಟ್ಟೆಚ್ಚರದಲ್ಲಿ ನಡೆಯಿತು. ಹಲವು ಮಾರ್ಗಸೂಚಿಗಳಡಿ ಅಭ್ಯರ್ಥಿಗಳನ್ನ ತಪಾಸಣೆ ಮಾಡಲಾಯಿತು.

ಚೈನ್, ಕಿವಿಯೋಲೆ, ಉಂಗುರ, ಕೈಕಡಗ, ದೊಡ್ಡ ದೊಡ್ಡ ಬಟನ್ ಇರೋ ಬಟ್ಟೆ ಹಾಗೂ ಪೂರ್ಣ ತೋಳಿನ ಶರ್ಟ್ ಬಳಸದಂತೆ ನಿಷೇಧ ಹೇರಲಾಗಿತ್ತು. ಜೊತೆಗೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಬ್ಲೂಟೂತ್ ಸೇರಿದಂತೆ ಮಹಿಳೆಯರು ಹೈ ಹೀಲ್ಸ್ ಚಪ್ಪಲಿ ಧರಿಸಲು ನಿಷೇಧವಿತ್ತು. ಇದಕ್ಕಾಗಿ ಮೆಟಲ್ ಡಿಟೆಕ್ಟರ್ ಅಳವಡಿಸಿ ಅಭ್ಯರ್ಥಿಗಳನ್ನು ಚೆಕ್ ಮಾಡಿ 117 ಪರೀಕ್ಷಾ ಕೇಂದ್ರಗಳಲ್ಲೂ ಎಂಟ್ರಿ ನೀಡಲಾಗುತ್ತಿತ್ತು.

ಇನ್ನು, ಸುಮಾರು 54 ಸಾವಿರ ಅಭ್ಯರ್ಥಿಗಳು ಪಿಎಸ್‌ಐ ಮರುಪರೀಕ್ಷೆ ಬರೆದಿದ್ದು, ಈ ಬಾರಿ ಯಾವುದೇ ಅಕ್ರಮ ನಡೆಯದಂತೆ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದೇವೆ ಎಂದು ಗೃಹಸಚಿವ ಪರಮೇಶ್ವರ್ ತಿಳಿಸಿದರು. ಪರೀಕ್ಷೆ ಅಕ್ರಮ ವಿಚಾರದಲ್ಲಿ ಸಬ್‌ಇನ್ಸ್‌ಪೆಕ್ಟರ್ ಲಿಂಗಯ್ಯನನ್ನು ವಿಚಾರಣೆ ನಡೆಸಲಾಗುತ್ತಿದೆ. ಹಾಗೆಯೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪರೀಕ್ಷೆಯ ಅಕ್ರಮದ ವರದಿಯನ್ನು ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಿದ್ದು, ಮುಂದಿನ ಕ್ರಮದ ಬಗ್ಗೆ ಅವರೇ ನಿರ್ಧರಿಸುತ್ತಾರೆ ಎಂದು ಹೇಳಿದರು.

ಅಂತೂ ಇಂತೂ 3 ವರ್ಷಗಳ ಬಳಿಕ ಪಿಎಸ್ಐ ಮರುಪರೀಕ್ಷೆ ಯಾವುದೇ ಗೊಂದಲವಿಲ್ಲದೇ ಮುಗಿದಿದೆ. ನಿಷ್ಪಕ್ಷಪಾತವಾದ ಫಲಿತಾಂಶಕ್ಕಾಗಿ ಅಭ್ಯರ್ಥಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ.

Exit mobile version