Site icon PowerTV

ಕಾಂಗ್ರೆಸ್ ಶಾಸಕನಿಂದ ಮತ್ತೆ ‘ರಾಮ’ಜಪ, ರಾಮಮಂದಿರ ನಿರ್ಮಿಸುತ್ತೇವೆ ಎಂದ ಇಕ್ಬಾಲ್ ಹುಸೇನ್

ರಾಮನಗರ : ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠೆ ಕೂಡ ಆಗಿದೆ. ಆದರೂ, ಕಾಂಗ್ರೆಸ್ಸಿಗರು ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಆದರೆ, ರಾಮನಗರ ಕಾಂಗ್ರೆಸ್​ ಶಾಸಕ ಇಕ್ಬಾಲ್ ಹುಸೇನ್ ಮತ್ತೆ ‘ರಾಮ’ಜಪ ಮಾಡಿದ್ದಾರೆ.

ರಾಮನಗರ ಜಿಲ್ಲೆಯ ವಿಭೂತಿಕೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಮನ ಪಾದಸ್ಪರ್ಶ ಜಾಗದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಗುತ್ತದೆ. ರಾಮನಗರದ ರಾಮದೇವರ ಬೆಟ್ಟ ಅಭಿವೃದ್ಧಿಗೆ ರಾಜ್ಯ ಬಜೆಟ್​ನಲ್ಲಿ ಹಣ ಘೋಷಣೆಯಾಗಲಿದೆ ಎಂದು ಹೇಳಿದ್ದಾರೆ.

ಪ್ರವಾಸೋದ್ಯಮ ತಾಣವಾಗಿ ಅದನ್ನು ಅಭಿವೃದ್ಧಿ ಮಾಡುತ್ತೇವೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ರಾಮದೇವರ ಬೆಟ್ಟ ಅಭಿವೃದ್ಧಿ ಮಾಡಿ ರಾಮನ ವಿಚಾರಧಾರೆಗಳನ್ನು ಜನರಿಗೆ ತಿಳಿಸುವ ಕೆಲಸ ಆಗುತ್ತದೆ. ಅಯೋಧ್ಯೆಯ ರಾಮಮಂದಿರವೂ ಆಗಬೇಕಿತ್ತು ಅದು ಆಗಿದೆ. ಅದನ್ನ ನಾವು ಸ್ವಾಗತ ಮಾಡ್ತೇವೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.

ರಾಮನ ಪೂಜೆಯನ್ನೂ ಮಾಡ್ತೇನೆ

ನಾನೂ ಕೂಡ ರಾಮಭಕ್ತ, ನಾನು ರಾಮನನ್ನು ಪೂಜೆ ಮಾಡ್ತೀನಿ. ರಾಮನಗರದಲ್ಲಿ ರಾಮೋತ್ಸವವನ್ನ ನಡೆಸಬೇಕು ಅಂತ ಚಿಂತನೆ ಮಾಡಿದ್ವಿ. ಅದನ್ನ ಭಕ್ತಿ ಪೂರ್ವಕವಾಗಿ ಮಾಡೇ ಮಾಡ್ತೀವಿ. ನಾನು ಚಿಕ್ಕವಯಸ್ಸಿನಿಂದಲೇ ಎಲ್ಲಾ ದೇವರ ಪೂಜೆ ಮಾಡಿದ್ದೇನೆ. ಹಾಗೆಯೇ ರಾಮನ ಪೂಜೆಯನ್ನೂ ಮಾಡ್ತೇನೆ ಎಂದು ಇಕ್ಬಾಲ್ ಹುಸೇನ್ ಈ ಹಿಂದೆಯೂ ಹೇಳಿದ್ದಾರೆ.

Exit mobile version