Site icon PowerTV

ಅರ್ಧಂಬರ್ಧ ಮಂದಿರ ಉದ್ಘಾಟಿಸಿ, ವೋಟು ಬಾಚುತ್ತಿರುವವರು ಹಿಂದೂ ವಿರೋಧಿಗಳಲ್ಲವೇ? : ನಟ ಕಿಶೋರ್ ಪ್ರಶ್ನೆ

ಬೆಂಗಳೂರು : ಅರ್ಧಂಬರ್ಧ ಮಂದಿರ ಉದ್ಘಾಟಿಸಿ ವೋಟು ಬಾಚುತ್ತಿರುವವರು ಹಿಂದೂ ವಿರೋಧಿಗಳಲ್ಲವೇ? ಎಂದು ನಟ ಕಿಶೋರ್ ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಅಸಲಿ ಹಿಂದೂ ವಿರೋಧಿ ಯಾರು? ಈ ಅಯೋಗ್ಯ ರಾಜಕಾರಿಣಿಗಳಿಗೆ ರಾಮ ಬರೀ ರಾಜಕೀಯ ಲಾಭಕ್ಕಾಗಿಯೇ ಇರುವ ವ್ಯಾಪಾರದ ಸರಕು ಅಷ್ಟೇ ಎಂದು ಛೇಡಿಸಿದ್ದಾರೆ.

ನಿಜವಾದ ದೈವವೆನ್ನುವ ನಂಬಿಕೆ ಇರುವುದು ಮಂದಿರ ಮಸೀದಿ ಚರ್ಚುಗಳಲ್ಲಲ್ಲ. ಗಾಂಧಿಯಂತೆ, ಜೀವನದ ಪ್ರತಿ ನಡೆಯಲ್ಲಿ ರಾಮ.. ಪ್ರತಿ ನುಡಿಯಲ್ಲಿ ರಾಮ.. ಸಾವಲ್ಲೂ ಹೇ ರಾಮ.. ಈ ಢೋಂಗಿಗಳಿಗೆ ಎಂದಾದರೂ ಅದು ಸಾಧ್ಯವೇ..? ಎಷ್ಟೇ ಆಗಲಿ ಆ ಗಾಂಧಿಯನ್ನು ಕೊಂದವರಲ್ಲವೇ..? ಎಂದು ಕಿಡಿಕಾರಿದ್ದಾರೆ.

ಮಂತ್ರಾಕ್ಷತೆ ಹಂಚುತ್ತಿರುವವರೂ ಹಿಂದೂ ವಿರೋಧಿ?

ರಾಮಮಂದಿರದ ರಾಜಕೀಕರಣವನ್ನು ವಿರೋಧಿಸುತ್ತಿರುವ ಶಂಕರಾಚಾರ್ಯರುಗಳು ಹಿಂದೂ ವಿರೋಧಿಗಳಲ್ಲವೆಂದರೆ, ನಿಜವಾದ ಹಿಂದೂ ವಿರೋಧಿಗಳು ಯಾರು? ಜ್ವಲಂತ ಸಮಸ್ಯೆಗಳನ್ನು ಮರೆಮಾಚಿ, ಅರ್ಧಂಬರ್ಧ ದೇವಸ್ಥಾನದ ಉದ್ಘಾಟನೆ ಮಾಡಿ ವೋಟು ಬಾಚಲು ನಿಂತಿರುವ ಧೂರ್ತರು ಅವರ ಅಂಧಭಕ್ತರು ಹಿಂದೂ ವಿರೋಧಿಗಳೇ ಅಲ್ಲವೇ? ಅವರ ಧರ್ಮಾಂಧತೆಯ ಮಂಕುಬೂದಿಯ ಭ್ರಮೆಯಲ್ಲಿ ಮಂತ್ರಾಕ್ಷತೆ ಹಂಚುತ್ತಿರುವವರೂ ಅದೇ ಆಗಿಬಿಡುವುದಿಲ್ಲವೇ..? ಎಂದು ಚಾಟಿ ಬೀಸಿದ್ದಾರೆ.

ವಿಶ್ವಗುರು ಭಕ್ತರು ಈಗ ಏನು ಮಾಡ್ತಾರೆ?

ಧರ್ಮದ ರಾಜಕೀಕರಣವನ್ನು ವಿರೋಧಿಸುವವರನ್ನು ಹಿಂದೂ ವಿರೋಧಿಗಳು, ದೇಶ ವಿರೋಧಿಗಳೆಂದು ಟ್ರೋಲ್ ಮಾಡುವ ವಿಶ್ವಗುರು ಭಕ್ತರು ಮತ್ತು ತನ್ನ ವೃತ್ತಿಧರ್ಮಕ್ಕೆ ದ್ರೋಹ ಬಗೆದ ಗೋದಿ ಮಾಧ್ಯಮದವರು ಈಗೇನು ಮಾಡುತ್ತಾರೆ. ಶಂಕರಾಚಾರ್ಯರುಗಳನ್ನೂ ಹಿಂದೂ ವಿರೋಧಿಗಳು ದೇಶ ವಿರೋಧಿಗಳೆಂದು ಟ್ರೋಲ್ ಮಾಡುತ್ತಾರೆಯೇ? ಎಂದು ನಟ ಕಿಶೋರ್ ಪ್ರಶ್ನಿಸಿದ್ದಾರೆ.

Exit mobile version