Site icon PowerTV

ನೀನು ಕೆಟ್ಟ ಹುಳು, ಹಿಂದೂ ಸಮಾಜಕ್ಕೇ ಕಳಂಕ : ದಿನೇಶ್ ಗುಂಡೂರಾವ್

ಬೆಂಗಳೂರು : ಸಿಎಂ ಸಿದ್ದರಾಮಯ್ಯರಿಗೆ ‘ಮಗನೇ’ ಅಂತ ಸಂಬೋಧಿಸಿರುವ ಅನಂತ್ ಕುಮಾರ್ ಹೆಗಡೆ ಹಿಂದೂ ಸಮಾಜದ ಕಳಂಕ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಾಯಿ ಬಿಟ್ಟರೆ ಹೊಡಿ, ಬಡಿ, ಕೊಚ್ಚು, ಕೊಲ್ಲು, ದ್ವೇಷ, ಸೇಡು ಎನ್ನುವ ಅನಂತ್ ಕುಮಾರ್ ಹೆಗಡೆಯಂತಹವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಟ್ಟ ಹುಳು ಇದ್ದಂತೆ ಎಂದು ಛೇಡಿಸಿದ್ದಾರೆ.

ವಯಸ್ಸಿನಲ್ಲಿ ಹಿರಿಯರಾದವರಿಗೆ ಮರ್ಯಾದೆ ಕೊಡುವುದು ನಮ್ಮ ಹಿಂದೂ ಧರ್ಮ ಕಲಿಸಿರುವ ಸಂಸ್ಕಾರ. ಅನಂತ್ ಕುಮಾರ್ ಹೆಗಡೆಯವರು ಯಾವ ಧರ್ಮದಿಂದ ಈ ರೀತಿ ಕೊಳಕು ಭಾಷೆ ಮಾತನಾಡುವ ಸಂಸ್ಕಾರ ಕಲಿತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

ಹಿಂದುತ್ವದ ಅಮಲು ತುಂಬಿಕೊಂಡಿದೆ

ಅನಂತ್ ಕುಮಾರ್ ಹೆಗಡೆಯವರೇ, ಸಾರ್ವಜನಿಕವಾಗಿ ಹೇಗೆ ಮಾತಾಡಬೇಕು ಹಾಗೂ ಹೇಗೆ ವರ್ತಿಸಬೇಕು ಎಂಬ ಕನಿಷ್ಟ ಜ್ಞಾನವನ್ನು ದಯವಿಟ್ಟು ಬೆಳೆಸಿಕೊಳ್ಳಿ. ನಿಮ್ಮಂತೆ ಹಿಂದುತ್ವದ ಅಮಲು ತುಂಬಿಕೊಂಡಿರುವ ಕೆಲವರಿಗೆ ಮಾತ್ರ ನಿಮ್ಮ ಅಸಹ್ಯದ ಮಾತುಗಳು ರುಚಿಸಬಹುದೇನೋ? ಆದರೆ, ಪ್ರಜ್ಞಾವಂತ ಹಿಂದೂಗಳು ಯಾವತ್ತಿಗೂ ನಿಮ್ಮ ಮಾತು ಒಪ್ಪಲಾರರು ಎಂದು ಚಾಟಿ ಬೀಸಿದ್ದಾರೆ.

ನೆಲದ ಪಾವಿತ್ರ್ಯ ಹಾಳು ಮಾಡಬೇಡಿ

‘ಕುಲವಂ ನಾಲಗೆ ನುಡಿಯಿತು’ ಎಂಬಂತೆ ಉತ್ತರ ಕನ್ನಡ ಸಂಸದರ ಸಂಸ್ಕಾರ ಅವರ ಮಾತುಗಳಲ್ಲೇ ತಿಳಿಯುತ್ತದೆ. ಬಸವಣ್ಣ, ಕುವೆಂಪು, ನಾರಾಯಣ ಗುರು ಹಾಗೂ ಕನಕದಾಸರಂತಹ ಅನೇಕ ಮಹಾನ್ ವ್ಯಕ್ತಿಗಳು ಬದುಕಿ ಬಾಳಿದ ನೆಲವಿದು. ನಿಮ್ಮ ಕೊಳಕು ಮಾತುಗಳಿಂದ ಈ ನೆಲದ ಪಾವಿತ್ರ್ಯವನ್ನು ಹಾಳು ಮಾಡಬೇಡಿ ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

Exit mobile version