Site icon PowerTV

Suchana Seth: ಟಿಶ್ಯೂ ಪೇಪರ್‌ ಮೇಲೆ ಮಗನ ಹತ್ಯೆಗೆ ಸಂಚು ರೂಪಿಸಿದ್ದಳಾ ಸುಚನಾ ಸೇಠ್‌?

ಬೆಂಗಳೂರು: ಇಡೀ ದೇಶವೇ ಬೆಚ್ಚಿ ಬೀಳಿಸುವಂತಹ ಭಯಾನಕ ಕೃತ್ಯೆ ಮಾಡಿದ ಸುಚನಾ ಸೇಠ್ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಲೇ ಇದೆ.

ಹೌದು, ನಾಲ್ಕು ವರ್ಷದ ಮಗನನ್ನು ಗೋವಾದಲ್ಲಿ ಹತ್ಯೆಗೈದ ಆರೋಪದ ಮಹಿಳೆ ಸುಚನಾ ಸೇಠ್‌ ಬಂಧಿತಳಾಗಿ ಪೊಲೀಸ್‌ ವಿಚಾರಣೆ ಎದುರಿಸುತ್ತಿದ್ದಾಳೆ. ಈ ಪ್ರಕರಣದ ಒಂದೊಂದೇ ಮಾಹಿತಿ ಇದೀಗ ಹೊರ ಬರುತ್ತಿದೆ. ಇದೀಗ ಪೊಲೀಸರು ಆಕೆಯ ಕೈ ಬರಹದ ಟಿಪ್ಪಣಿಯನ್ನು ವಶಪಡಿಸಿಕೊಂಡಿದ್ದಾರೆ.

ಟಿಪ್ಪಣಿಯ ನಿಖರ ವಿಷಯವನ್ನು ಪೊಲೀಸರು ಬಹಿರಂಗಪಡಿಸದಿದ್ದರೂ, ಸುಚನಾ ಸೇಠ್ ತನ್ನ ಪತಿ ವೆಂಕಟ್ ರಾಮನ್‌ನೊಂದಿಗಿನ ಕಹಿ ಸಂಬಂಧದ ಬಗ್ಗೆ ಅದರಲ್ಲಿ ಬರೆದಿದ್ದಾಳೆ ಎಂದು ಮೂಲಗಳು ತಿಳಿಸಿವೆ.

 ಟಿಶ್ಯೂನಲ್ಲಿ ಆಕೆ ಬರೆದಿದ್ದು ಏನು..?

ಸುಚನಾ ಸೇಠ್‌ ಟಿಶ್ಯೂ ಪೇಪರ್‌ನ ಮೇಲೆ ಐ ಲೈನರ್‌ ಬಳಸಿ ಇದನ್ನು ಬರೆದಿದ್ದಾಳೆ. ಹೆಚ್ಚಿನ ತನಿಖೆಗಾಗಿ ಈ ಕೈ ಬರಹವನ್ನು ಫಾರೆನ್ಸಿಕ್‌ ಸೈನ್ಸ್‌ ಲಾಬ್ ಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪತಿ ವೆಂಕಟ್ ರಾಮನ್ ಜತೆಗಿನ ಸಂಬಂಧ ಹೇಗೆ ಹದಗೆಟ್ಟಿದೆ ಮತ್ತು ಮಗುವನ್ನು ಭೇಟಿಯಾಗಲು ವೆಂಕಟ್ ರಾಮನ್‌ಗೆ ಅವಕಾಶ ನೀಡಿದ ನ್ಯಾಯಾಲಯದ ಆದೇಶದ ಬಗ್ಗೆ ಅಸಮಾಧಾನಗೊಂಡಿರುವ ಬಗ್ಗೆ ಸುಚನಾ ಅದರಲ್ಲಿ ಉಲ್ಲೇಖಿಸಿದ್ದಾಳೆ. ಇದು ಆಕೆಯ ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಚ್ಛೇದನ ಪಡೆದಿದ್ದು ಏಕೆ ಸುಚಿನಾ ಸೇಠ್..?

ಈ ಮಧ್ಯೆ ಸುಚನಾ ಸೇಠ್‌ ಪತಿಯಿಂದ ಗೃಹ ದೌರ್ಜನ್ಯಕ್ಕೆ ತುತ್ತಾಗಿರುವ ಬಗ್ಗೆ ಹಿಂದೆ ದೂರು ದಾಖಲಿಸಿದ್ದ ಹಾಗೂ ಜೀವನಾಂಶ ಅಪೇಕ್ಷಿಸಿದ್ದ ವಿವರಗಳು ಹೊರಗೆ ಬಂದಿತ್ತು. ಆಕೆ ಆಗಸ್ಟ್‌ನಲ್ಲಿ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಪತಿಯ ವಿರುದ್ಧ ದಾಖಲಿಸಿದ್ದಳು. ಪತಿ ವೆಂಕಟರಾಮನ್‌ ತನ್ನ ಹಾಗೂ ಮಗುವಿನ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಸುಚನಾ ಆರೋಪಿಸಿದ್ದಳು. ಪತಿಯಿಂದ ವಿಚ್ಛೇದನ ಕೋರಿದ್ದು, ವಾರ್ಷಿಕ ₹1 ಕೋಟಿ ರೂ.ಗೂ ಅಧಿಕ ಆದಾಯ ಹೊಂದಿರುವ ಪತಿಯಿಂದ ಮಾಸಿಕ ₹2.5 ಲಕ್ಷ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಈಕೆ ಪೂರ್ವಯೋಜಿತ ಸಂಚು ನಡೆಸಿದ್ದಳು ಎಂಬುದಕ್ಕೆ ಪೂರಕ ಸಾಕ್ಷ್ಯವಾಗಿ ಈಕೆ ಉಳಿದಿದ್ದ ರೂಮಿನಲ್ಲಿದ್ದ ಖಾಲಿ ಕೆಮ್ಮು ಸಿರಪ್ ಬಾಟಲಿಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

Exit mobile version